ಮಂಗಳೂರು: ಕಳೆದೊಂದು ವಾರದ ಅವಧಿಯಲ್ಲಿ ದ.ಕ. ಜಿಲ್ಲೆ ಸಹಿತ ರಾಜ್ಯದ ಕೆಲವು ಕಡೆಗಳಿಂದ ನಿಷೇಧಿತ “ತುರಾಯಾ ಸ್ಯಾಟಲೈಟ್ ಫೋನ್’ ಮೂಲಕ ವಿದೇಶಕ್ಕೆ ಸಂಪರ್ಕ ಆಗಿರುವುದರ ಕುರಿತು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ ಎಂದು ತಿಳಿದು ಬಂದಿದೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಅರಣ್ಯ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ನೆಟ್‌ವರ್ಕ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಕೆಲವು ಬಾರಿ ಈ ರೀತಿಯ ಫೋನ್ ನೆಟ್‌ವರ್ಕ್‌ಗಳು ಪತ್ತೆಯಾಗಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಆದರೆ ಪೊಲೀಸರು ಖಚಿತಪಡಿಸಿರಲಿಲ್ಲ.
ಇತ್ತೀಚೆಗೆ ಶ್ರೀಲಂಕಾದಿಂದ ತಮಿಳುನಾಡು/ಕೇರಳ, ಕರ್ನಾಟಕ ಕರಾವಳಿ ಮೂಲಕ ಪಾಕಿಸ್ಥಾನ ಕಡೆಗೆ ಶಂಕಿತ ಉಗ್ರರು ಹೋಗುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಪ್ತಚರ ಇಲಾಖೆ ಕರಾವಳಿಯಲ್ಲಿ ಹೈ ಅಲರ್ಟ್‌ಗೆ ಸೂಚಿಸಿತ್ತು.
ಮಾಹಿತಿ ಇಲ್ಲ: ಎಸ್‌ಪಿ:
“ದ.ಕ. ಜಿಲ್ಲೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಅಧಿಕೃತವಾಗಿ ಯಾವುದೇ ರೀತಿಯ ಮಾಹಿತಿ ನಮಗೆ ಲಭಿಸಿಲ್ಲ’ ಎಂದು ದ.ಕ. ಎಸ್‌ಪಿ ಹೃಷಿಕೇಶ್ ಸೋನಾವಣೆ ಅವರು ಪ್ರತಿಕ್ರಿಯಿಸಿದ್ದಾರೆ.