Advertisement

ಉಕ್ರೇನ್‌ನಲ್ಲಿ ಹೋರಾಡಲು ಕೈದಿಗಳಿಗೆ “ಸ್ವಾತಂತ್ರ್ಯ’ದ ಆಮಿಷ!

06:03 PM Aug 12, 2022 | Team Udayavani |

ಮಾಸ್ಕೋ: ಉಕ್ರೇನ್‌ ವಿರುದ್ಧದ ದಾಳಿಯನ್ನು ಮುಂದುವರಿಸಿರುವ ರಷ್ಯಾವು ಈಗ ಹೊಸತೊಂದು ತಂತ್ರದ ಮೊರೆ ಹೋಗಿದೆ. ಉಕ್ರೇನ್‌ನಲ್ಲಿ ಯಾರು ಹೋರಾಡಲು ಒಪ್ಪುತ್ತಾರೋ ಅಂಥವರನ್ನು ಬಿಡುಗಡೆ ಮಾಡುವ ಆಫ‌ರ್‌ ಅನ್ನು ರಷ್ಯಾ ಪಡೆಗಳು ಕೈದಿಗಳ ಮುಂದಿಟ್ಟಿವೆ.

Advertisement

ಸೈಂಟ್‌ ಪೀಟರ್ಸ್‌ಬರ್ಗ್‌ ಪೀನಲ್‌ ಕಾಲೊನಿಯಲ್ಲಿರುವ ಕನಿಷ್ಠ 11 ಕೈದಿಗಳನ್ನು ಈಗಾಗಲೇ ರಷ್ಯಾದ ಸೈನಿಕರು ಸಂಪರ್ಕಿಸಿದ್ದಾರೆ. ಸ್ವಾತಂತ್ರ್ಯ ಬೇಕೆಂದರೆ ಉಕ್ರೇನ್‌ನಲ್ಲಿ ಯುದ್ಧ ಮಾಡಲು ರೆಡಿಯಾಗಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಯಾವ ಕೈದಿಯು ಉಕ್ರೇನ್‌ನಲ್ಲಿ ಹೋರಾಡಲು ಒಪ್ಪುತ್ತಾರೋ, ಅಂಥವರನ್ನು ಬಿಡುಗಡೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ.

ರಷ್ಯಾದ ಸುಮಾರು 7 ಜೈಲುಗಳಿಂದ 1,500ರಷ್ಟು ಕೈದಿಗಳು ಇಂಥ ಒಪ್ಪಂದಕ್ಕೆ ಸಹಿ ಹಾಕಿ ಯುದ್ಧಭೂಮಿಗೆ ತೆರಳಿದ್ದಾರೆ ಎಂದು ಕೈದಿಗಳ ಹಕ್ಕುಗಳ ಸಂಘಟನೆಯ ಸ್ಥಾಪಕ ವ್ಲಾಡಿಮಿರ್‌ ಹೇಳಿದ್ದಾರೆ. ಇನ್ನೊಂದೆಡೆ, ಈ ರೀತಿ “ಸ್ವಾತಂತ್ರ್ಯ’ದ ಆಸೆಯಿಂದ ಹೋದವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದೂ ಹೇಳಲಾಗಿದೆ.

ರಷ್ಯಾ ವಾಯು ನೆಲೆ ಫೋಟೋ ವೈರಲ್‌
ಕ್ರಿಮಿಯಾದಲ್ಲಿರುವ ರಷ್ಯಾದ ವಾಯುನೆಲೆಯ ಮೇ 16ರ ಮತ್ತು ಆ.11ರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವಾಯುನೆಲೆಯಲ್ಲಿ ಉಂಟಾದ ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದ್ದು ಎಂದು ರಷ್ಯಾ ಹೇಳಿದರೆ, ಅದು ಉಕ್ರೇನ್‌ ಸೇನಾ ಪಡೆ ನಡೆಸಿದ ದಾಳಿ ಎಂದು ತಜ್ಞರು ಉಪಗ್ರಹ ಚಿತ್ರವನ್ನು ಆಧರಿಸಿ ಹೇಳಿದ್ದಾರೆ.

ಈ ಚಿತ್ರಗಳಲ್ಲಿರುವಂತೆ, ವಾಯುನೆಲೆಯ ಮೇಲಿನ ದಾಳಿಯ ತೀವ್ರತೆಗೆ 9 ವಿಮಾನಗಳು ಧ್ವಂಸಗೊಂಡಿವೆ. ಮೂರು ಕಡೆ ದೊಡ್ಡ ಕುಳಿಗಳು ಉಂಟಾಗಿವೆ. ಇದು ಮೇಲ್ನೋಟಕ್ಕೆ ಬಾಂಬ್‌ ಅಥವಾ ಕ್ಷಿಪಣಿ ದಾಳಿಯಂತೆ ಕಾಣಿಸುತ್ತಿದೆ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next