Advertisement

ಗೃಹ ಇಲಾಖೆಗೆಂದೇ ಇಸ್ರೋದಿಂದ ಉಪಗ್ರಹ

12:30 AM Jan 18, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಮುಂಚೂಣಿ ನೆಲೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯಕ್ಕಾಗಿಯೇ ವಿಶೇಷವಾದ ಉಪಗ್ರಹವೊಂದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಉಡಾವಣೆ ಮಾಡಲಿದೆ.

Advertisement

ಗಡಿ ನಿರ್ವಹಣೆ ಸುಧಾರಿಸಲು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಸುವ ಕುರಿತು ಕಾರ್ಯಪಡೆಯೊಂದು ಸಲ್ಲಿಸಿದ್ದ ಶಿಫಾರಸಿಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಸ್ರೋ ಮತ್ತು ರಕ್ಷಣಾ ಸಚಿವಾಲಯದ ಸಹಭಾಗಿತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಇದಕ್ಕಾಗಿ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಲಾಗಿದೆ.

ಭದ್ರತೆ, ಕಾರ್ಯಾಚರಣೆಗಳ ಯೋಜನೆ ಮತ್ತು ಗಡಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ಸಂಪನ್ಮೂಲಗಳನ್ನು ಬಳಸುವಂತೆ ಮಾಡುವ ಮೂಲಕ ಗಡಿ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಕೂಡ ಇದರ ಉದ್ದೇಶವಾಗಿದೆ. ಅಲ್ಪಾವಧಿ ಯೋಜನೆಯನ್ವಯ, ಯೋಧರಿಗೆ ಹೈ ರೆಸೊಲ್ಯೂಷನ್‌ ಇಮೇಜರಿ ಮತ್ತು ಸಂವಹನ ತಂತ್ರಜ್ಞಾನ ಪೂರೈಸಿದರೆ, ಮಧ್ಯಮಾವಧಿ ಯೋಜನೆಯನ್ವಯ ಗೃಹ ಇಲಾಖೆಯ ಬಳಕೆಗೆಂದೇ ಇಸ್ರೋದಿಂದ ಉಪಗ್ರಹ ಉಡಾವಣೆ ಮಾಡಲಾಗುತ್ತದೆ. ದೀರ್ಘಾವಧಿ ಯೋಜನೆಯಲ್ಲಿ, ಸಂಬಂಧಪಟ್ಟ ಸಂಸ್ಥೆಗಳಿಗೆ ಗೃಹ ಇಲಾಖೆಯು ಉಪಗ್ರಹದ ಮಾಹಿತಿಗಳನ್ನು ಹಂಚಿಕೊಳ್ಳಲಿದೆ.

ಯೋಧರನ್ನು ದುರ್ಗಮ ಪ್ರದೇಶದಲ್ಲಿ ನಿಯೋಜಿಸಿದಾಗಲೂ ಉಪಗ್ರಹ ಮೂಲಕ ಅವರಿಗೆ ದಾರಿ ಮತ್ತು ಇತರ ಮಾಹಿತಿಗಳನ್ನು ಈ ಮೂಲಕ ನೀಡಲು ಅನುಕೂಲವಾಗಲಿದೆ. ಗಡಿ ಪ್ರದೇಶ ಮಾತ್ರವಲ್ಲದೆ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿಯೂ ಇದರ ಉಪಯೋಗ ಪಡೆಯಲು ನಿರ್ಧರಿಸಲಾಗಿದೆ. ಆರಂಭದಲ್ಲಿ ಗಡಿ ನಿಯಂತ್ರಣ ಪಡೆಗೆ ಅನಂತರ ಇತರ ವಿಭಾಗಗಳಿಗೂ ಈ ಸೌಲಭ್ಯ ವಿಸ್ತರಿಸುವ ಯೋಜನೆ ಹೊಂದಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next