ಬೆಂಗಳೂರು: ಸಮ್ಮಿಶ್ರ ಸರಕಾರ ರಚನೆಯಾಗಿ 6 ತಿಂಗಳುಗಳ ಅನಂತರ ಸಂಪುಟ ವಿಸ್ತರಣೆ ಎಂದು ಪ್ರಾರಂಭಿಸಿ ಪುನಾರಚನೆ ಎಂಬ ಜೇನುಗೂಡಿಗೆ ಕೈ ಹಾಕುವ ಮುನ್ನ ಕಾಂಗ್ರೆಸ್ ಗುಣಾಕಾರ-ಭಾಗಾಕಾರ ಹಾಕಿಯೇ ಮುಂದಡಿಯಿಟ್ಟಿದೆ. ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸುವುದಷ್ಟೇ ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಾರ್ಗೆಟ್ 20 ಪ್ಲಸ್ ಗುರಿಯೊಂದಿಗೆ ನಾಯಕ, ಲಂಬಾಣಿ, ಮುಸ್ಲಿಂ, ಕುರುಬ, ಲಿಂಗಾಯತ ಸಮುದಾಯದ ಓಟ್‌ಬ್ಯಾಂಕ್ ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯತಂತ್ರ ಇದರ ಹಿಂದಿದೆ.
ಸಂಪುಟ ಪುನಾರಚನೆಯಲ್ಲಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸದಿದ್ದರೂ 4 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, 2 ಸಂಸದೀಯ ಕಾರ್ಯದರ್ಶಿ, 1 ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮುದಾಯಕ್ಕೆ ಸಮಾಧಾನಪಡಿಸಲಾಗಿದೆ.
ಅದೇ ರೀತಿ ಲಿಂಗಾಯತ ಸಮುದಾಯಕ್ಕೆ ಎರಡರ ಜತೆಗೆ ಮತ್ತೂಂದು ಸಚಿವ ಸ್ಥಾನ ಮೂರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಎರಡು ಸಂಸದೀಯ ಕಾರ್ಯದರ್ಶಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ನೀಡಿ ಅಸಮಾಧಾನ ತಣಿಸುವ ಕೆಲಸ ಮಾಡಲಾಗಿದೆ.
ಕುರುಬ ಸಮುದಾಯಕ್ಕೆ ಎರಡು ಸಚಿವ ಸ್ಥಾನದ ಜತೆಗೆ ಎರಡು ನಿಗಮ ಮಂಡಳಿ, ಒಂದು ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಸತೀಶ್ ಜಾರಕಿಹೊಳಿ, ತುಕಾರಾಂ, ಪರಮೇಶ್ವರ್ ನಾಯಕ್, ಆರ್.ಬಿ.ತಿಮ್ಮಾಪುರ, ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಿರುವುದು, ವೆಂಕಟರಮಣಪ್ಪ ಅವರನ್ನು ಮುಂದುವರಿಸಿರುವುದು ಪ್ರಮುಖವಾಗಿ ನಾಯಕ, ಲಂಬಾಣಿ, ಬೋವಿ, ದಲಿತ ಎಡಗೈ ಪಂಗಡ ಮತ್ತು ಮುಸ್ಲಿಂ ಸಮುದಾಯವನ್ನು ಲೋಕಸಭೆ ಚುನಾವಣೆಯಲ್ಲಿ ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರದ ಭಾಗ. ಈ ಎಲ್ಲ ಸಚಿವರಿಗೂ ಮುಂದಿನ ಆರು ತಿಂಗಳು ತಮ್ಮ ತಮ್ಮ ಸಮುದಾಯದ ಮತ ಕಾಂಗ್ರೆಸ್‌ನತ್ತ ಸೆಳೆಯುವ ಟಾಸ್ಕ್ ನೀಡಲಾಗಿದೆ ಎಂದು ಹೇಳಲಾಗಿದೆ.
ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಒಕ್ಕಲಿಗ ಸಮುದಾಯದವರೇ ಇರುವುದು. ಜೆಡಿಎಸ್‌ನಿಂದ 7, ಕಾಂಗ್ರೆಸ್‌ನಿಂದ ಇಬ್ಬರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿರುವುದರಿಂದ ಲೋಕಸಭೆ ಚುನಾ ವಣೆಯಲ್ಲಿ ಒಕ್ಕಲಿಗ ಸಮುದಾಯ ಮೈತ್ರಿ ಪಕ್ಷದ ಕೈ ಹಿಡಿಯಲಿದೆ ಎಂಬ ವಿಶ್ವಾಸ ಇರುವುದರಿಂದ ಇತರ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾಲ್ಕು ಗಂಟೆಗಳ ಕಾಲ ನಡೆದ ಸಮಾಲೋಚನೆ ವೇಳೆ ಸಂಪುಟ ಪುನಾರಚನೆಯಿಂದ ಕಾಂಗ್ರೆಸ್‌ಗೆ ಜಾತಿವಾರು , ಪ್ರಾದೇಶಿಕವಾರು ಆಗುವ ಲಾಭವನ್ನು ಎಳೆಎಳೆಯಾಗಿ ಬಿಡಿಸಿಡಲಾಯಿತು. ಇದಾದ ಅನಂತರವೇ ರಾಹುಲ್ ಗಾಂಧಿ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದರು ಎಂದು ಹೇಳಲಾಗಿದೆ.
— ಲಕ್ಷ್ಮೀನಾರಾಯಣ