ಧಾರವಾಡ: ಇಲ್ಲಿಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಮಾವು ಮೇಳದ ಜೊತೆಗೆ ಆರಂಭಿಸಿದ್ದ ಸಸ್ಯ ಸಂತೆ ಮಳೆಗಾಲ ಮುಗಿಯುವರೆಗೂ ಮುಂದುವರಿಯಲಿದೆ. ಮಾವು ಮೇಳ ಮುಗಿದ ಬಳಿಕ ಜೂ. 1ರಿಂದಲೇ ಸಸ್ಯ ಸಂತೆ ಆರಂಭಿಸಲಾಗಿದ್ದು, ಮಳೆಗಾಲದ ಅವಧಿ ಮುಗಿಯುವರೆಗೂ ಸಂತೆ ಇರಲಿದೆ. ಕಚೇರಿ ಆವರಣದಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯ ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗಾಗಿ ಕುಂದಗೋಳ ತಾಲೂಕಿನ ಜಿಗಳೂರು ತೋಟಗಾರಿಕೆ ಕ್ಷೇತ್ರ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಹಾಗೂ ನವಲಗುಂದದ ತೋಟಗಾರಿಕೆ ಕಾರ್ಯಾಲಯಗಳಲ್ಲಿಯೂ ಸಸ್ಯ ಸಂತೆಗಳು ನಡೆಯುತ್ತಿವೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾವು, ಕರಿಬೇವು, ನುಗ್ಗೆ, ಪಪ್ಪಾಯ, ತೆಂಗು, ನಿಂಬೆ ಹಾಗೂ ವಿವಿಧ ಅಲಂಕಾರಿಕ ಸಸ್ಯಗಳು ಇಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಆಪೂಸ್ ತಳಿಯ ಮಾವಿನ ಸಸಿಗಳನ್ನು ಎರಡು ಊಟೆ ಕಸಿ ವಿಧಾನದಲ್ಲಿ ಇಲ್ಲಿ ಅಭಿವೃದ್ಧಿ ಪಡಿಸಿ ಮಾರಾಟ ಮಾಡಲಾಗುತ್ತಿದೆ. ಜೂನ್ ತಿಂಗಳಿನಲ್ಲಿಯೇ 6 ಸಾವಿರ ಮಾವಿನ ಸಸಿಗಳು ಮಾರಾಟವಾಗಿವೆ. ನೆರೆಯ ಜಿಲ್ಲೆಗಳಿಂದಲೂ ಇಲ್ಲಿನ ಮಾವಿನ ಸಸಿಗಳಿಗೆ ಬೇಡಿಕೆ ಬರುತ್ತಿದೆ. ದೂರದ ಚಾಮರಾಜನಗರ ಜಿಲ್ಲೆಗೂ ಮಾವಿನ ಸಸಿಗಳನ್ನು ಕಳಿಸಲಾಗಿದೆ.
ತೋಟಗಾರಿಕೆ ಇಲಾಖೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಸ್ಯಕ್ಷೇತ್ರ ಹೊಂದಿದೆ. ಇಲ್ಲಿ ಬೆಳೆಯಲಾಗುವ ಸಸಿಗಳಿಗೆ ಸಕಾಲಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸಸ್ಯ ಸಂತೆ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಜನರ ಬೇಡಿಕೆಗೆ ಅನುಸಾರವಾಗಿ ಇಲ್ಲಿ ಸಸಿಗಳನ್ನು ಅಭಿವೃದ್ಧಿ ಪಡಿಸಿ ಒದಗಿಸಲಾಗುತ್ತಿದೆ. ಮಳೆಗಾಲ ಮುಗಿಯುವವರೆಗೂ ಸಸ್ಯ ಸಂತೆ ಮುಂದುವರಿಯುತ್ತದೆ.
ಡಾ| ರಾಮಚಂದ್ರ ಕೆ. ಮಡಿವಾಳ, ತೋಟಗಾರಿಕೆ ಉಪನಿರ್ದೇಶಕ