ಕೋಟ: ಸಾಸ್ತಾನ ಟೋಲ್‌ನಲ್ಲಿ ಉಡುಪಿ ಜಿ.ಪಂ.ಕೋಟ ಕ್ಷೇತ್ರ ವ್ಯಾಪ್ತಿಯ ಸ್ಥಳೀಯರ ಎಲ್ಲಾ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡುವುದಾಗಿ ಶುಕ್ರವಾರದ ಪ್ರತಿಭಟನೆ ಸಂದರ್ಭ ಜಿಲ್ಲಾಡಳಿತದ ಭರವಸೆಯಂತೆ ಸಂಸದೆ ಶೋಭಾ ಕರಂದ್ಲಾಜೆ ಘೋಷಿಸಿದ್ದರು. ಆದರೆ ಇದೀಗ ಸ್ಥಳೀಯರಿಗೆ ಮತ್ತೆ ಸಿಬಂದಿ ಕಿರಿ-ಕಿರಿ ನೀಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಸೋಮವಾರ ಟೋಲ್ ಪ್ಲಾಜಾಕ್ಕೆ ತೆರಳಿ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸಿಬಂದಿಗೆ ಎಚ್ಚರಿಕೆ
ಈ ಸಂದರ್ಭ ಟೋಲ್ ಮೇಲ್ವಿಚಾರಕ ಕೇಶವಮೂರ್ತಿಯನ್ನು ಸ್ಥಳಕ್ಕೆ ಕರೆಸಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ ಹಾಗೂ ಸದಸ್ಯರು ಮಾತುಕತೆ ನಡೆಸಿದರು. ಉಡುಪಿ ಜಿ..ಪಂ. ಕೋಟ ಕ್ಷೇತ್ರ ಹಾಗೂ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ಉಚಿತ ಪ್ರವೇಶ ನೀಡುವುದಾಗಿ ಸಂಸದೆಯವರು ತಿಳಿಸಿದ್ದಾರೆ. ಆದರೂ ನೀವು ಸ್ಥಳೀಯರಿಗೆ ಸಮಸ್ಯೆ ಮಾಡುತ್ತಿದ್ದೀರಿ. ಈ ರೀತಿ ಕಿರಿಕಿರಿ ನೀಡಿದರೆ ಮತ್ತೆ ಉಗ್ರ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರಿಗೆ ಸಮಸ್ಯೆ ಮಾಡುವುದಿಲ್ಲವೆಂದು ಭರವಸೆ ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡುವುದಿಲ್ಲ. ಆದರೆ ಕೆಲವರು ವಾಹನದ ಆರ್.ಸಿ. ತೋರಿಸಲು ಹಿಂದೇಟು ಹಾಕುತ್ತಾರೆ. ಆರ್.ಸಿ. ಕೇಳಿದರೆ ಬೇರೆ ದಾಖಲೆ ನೀಡುತ್ತಾರೆ. ಹೀಗಾಗಿ ಸಮಸ್ಯೆಯಾಗುತ್ತದೆ. ಆದ್ದರಿಂದ ದಯವಿಟ್ಟು ಎಲ್ಲರೂ ಆರ್.ಸಿ. ತೋರಿಸಿ ಶುಲ್ಕ ವಿನಾಯಿತಿ ಕೋರಬೇಕು ಎಂದು ಸಿಬಂದಿ ಮನವಿ ಮಾಡಿದರು. ಈ ಸಂದರ್ಭ ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಕಾನೂನು ಸಲಹೆಗಾರ ಶ್ಯಾಮ್ ಸುಂದರ್ ನಾೖರಿ, ಪ್ರಶಾಂತ ಶೆಟ್ಟಿ,ಅಲ್ವಿನ್ ಅಂದ್ರಾದೆ, ಸಾಲಿಗ್ರಾಮ ನಾಗರಾಜ ಗಾಣಿಗ, ಕಾರ್ಕಡ ರಾಜು ಪೂಜಾರಿ, ಅಚ್ಯುತ್ ಪೂಜಾರಿ, ರಾಘವೇಂದ್ರ ಐರೋಡಿ, ಸಂದೀಪ್ ಕುಂದರ್ ಕೋಡಿ, ಉದ್ಯಮಿ ನವೀನ್ ಬಾಂಜ್, ಸಹದೇವ ಸಾಸ್ತಾನ, ನಾರಾಯಣ, ರಾಘವೇಂದ್ರ ಐರೋಡಿ ಮೊದಲಾದವರು ಉಪಸ್ಥಿತರಿದ್ದರು.
ಯಾರಿಗೆ ಟೋಲ್ ವಿನಾಯಿತಿ?
ಉಡುಪಿ ಜಿ.ಪಂ. ಕೋಟ ಕ್ಷೇತ್ರದ ಐರೋಡಿ, ಪಾಂಡೇಶ್ವರ, ಕೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ ಗ್ರಾ.ಪಂ. ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವುದಾಗಿ ಜನಪ್ರತಿನಿಧಿಗಳ ಮಾತುಕತೆ ವೇಳೆ ಪ್ರಕಟವಾಗಿದೆ. ಆದ್ದರಿಂದ ಈ ಭಾಗದವರು ತಮ್ಮ ವಾಹನದ ಆರ್.ಸಿ. ಬುಕ್ ತೋರಿಸಿ ವಿನಾಯಿತಿ ಪಡೆಯಬಹುದು. ನಮ್ಮ ಬೇಡಿಕೆ ಇನ್ನೂ ಕೂಡ 20 ಕಿ.ಮೀ. ವರೆಗಿನ ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕು ಎನ್ನುವುದಾಗಿದ್ದು ಈ ಬಗ್ಗೆ ಹೋರಾಟ ಮುಂದುವರಿಯಲಿದೆ ಎಂದು ಜಾಗೃತಿ ಸಮಿತಿ ತಿಳಿಸಿದೆ.