ಮಂಗಳೂರು: ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದೇಶದ ಮೊದಲ ಅಂತಾರಾಷ್ಟ್ರೀಯ ಸ್ಟ್ಯಾಂಡ್ಅಪ್ ಪೆಡ್ಲಿಂಗ್ ಚಾಂಪಿಯನ್‌ಶಿಪ್ ಶುಕ್ರವಾರ ಆರಂಭಗೊಂಡಿತು.
ಮೊದಲ ದಿನ ನಡೆದ ಜೂನಿಯರ್ ಅಂಡರ್-16 ವಿಭಾಗದಲ್ಲಿ ಸ್ಥಳೀಯರಾದ ಆಕಾಶ್ ಪೂಜಾರ್ ಪ್ರಥಮ, ರವಿ ಪೂಜಾರ್ ದ್ವಿತೀಯ ಸ್ಥಾನ ಪಡೆದರು. ದಕ್ಷಿಣ ಕೊರಿಯದ ಜೀಹೊ ಹಾಂಗ್ 3ನೇ ಸ್ಥಾನಿಯಾದರು. ಆಕಾಶ್ 43.04 ನಿಮಿಷ, ಅವರ ಸಹೋದರ ರವಿ 47.24 ನಿಮಿಷ ಮತ್ತು ಜೀಹೊ ಹಾಂಗ್ 52.52 ನಿಮಿಷದಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು.
ಬಳಿಕ ಮಾತನಾಡಿದ ಆಕಾಶ್, “ಕಳೆದ 6 ತಿಂಗಳ ನಿರಂತರ ತರಬೇತಿ ಪಡೆಯುತ್ತಿದ್ದೆ. ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವುದರಿಂದ ಈ ಬಾರಿ ಎರಡು ರೀತಿ ಸವಾಲು ನನ್ನ ಮುಂದೆ ಇತ್ತು. ಒಂದರಲ್ಲಿ ಯಶಸ್ಸು ಸಾಧಿಸಿದ್ದು, ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆಯುವ ವಿಶ್ವಾಸವಿದೆ’ ಎಂದರು. ಎರಡನೇ ದಿನ ಪುರುಷರ ಮುಕ್ತ ವಿಭಾಗದಲ್ಲೂ ಆಕಾಶ್ ಸ್ಪರ್ಧಿಸಲಿದ್ದಾರೆ.
ಜೀಹೊ ಹ್ವಾಂಗ್ ಮಾತನಾಡಿ, “ದಕ್ಷಿಣ ಕೊರಿಯಕ್ಕೆ ಹೋಲಿಸಿದರೆ ಇಲ್ಲಿನ ಸ್ಪರ್ಧೆ ಹೆಚ್ಚು ಸವಾಲಿನಿಂದ ಕೂಡಿದೆ. ಆದರೂ ಸ್ಪರ್ಧೆಯನ್ನು ಆಸ್ವಾದಿಸಿದೆ. ಇದೇ ಮೊದಲ ಬಾರಿಗೆ ಭಾರತದ ಬೀಚ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ’ ಎಂದರು.13 ದೇಶಗಳ 40ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಯು.ಟಿ. ಖಾದರ್ ಚಾಲನೆ
ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಂಆರ್‌ಜಿ ಗ್ರೂಪ್ ಚೇರ್ಮನ್ ಪ್ರಕಾಶ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ, ಮಾಜಿ ಸಚಿವ ಅಭಯಚಂದ್ರ ಜೈನ್, ವಸಂತ್ ಬೆರ್ನ್ಹಾರ್ಡ್ ಮೊದಲಾದವರಿದ್ದರು.