Advertisement

ಸುಪ್ರೀಂ ತೀರ್ಪಿನ ಮೇಲೆ ಶಶಿ ಭವಿಷ್ಯ

08:00 AM Feb 14, 2017 | Harsha Rao |

ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನಲ್ಲಿ ನಡೆಯುತ್ತಿರುವ ಬರೋಬ್ಬರಿ 8 ದಿನಗಳ ರಾಜಕೀಯ ಹೈಡ್ರಾಮಾ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಮಂಗಳವಾರ ಎಐಎಡಿ ಎಂಕೆಯ ಎರಡೂ ಬಣಗಳಿಗೆ ಅತ್ಯಂತ ನಿರ್ಣಾಯಕ ದಿನವಾಗಿದ್ದು,  ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಇದು ಶಶಿಕಲಾ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ದೇಶಾದ್ಯಂತ ಮನೆಮಾಡಿದೆ.

Advertisement

ಇನ್ನೊಂದೆಡೆ, ಒಂದು ವಾರ ದೊಳಗಾಗಿ ತಮಿಳುನಾಡು ವಿಧಾನ ಸಭೆ ವಿಶೇಷ ಅಧಿವೇಶನ ಕರೆದು, ಬಹುಮತ ಸಾಬೀತಿಗೆ ಅವಕಾಶ ಕಲ್ಪಿಸಿ ಎಂದು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರಿಗೆ ಕೇಂದ್ರದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಸೋಮವಾರ ಸಂಜೆ ಸೂಚಿಸಿದ್ದಾರೆ. 1998ರಲ್ಲಿ ಜಗದಂಬಿಕಾ ಪಾಲ್‌ ಪ್ರಕರಣದಲ್ಲಿ ಸು.ಕೋ. ತೀರ್ಪನ್ನು ಉಲ್ಲೇಖೀಸಿದ ರೋಹಟಗಿ ಅವರು, ಅದರಂತೆಯೇ ತಮಿಳುನಾಡಿನಲ್ಲೂ ಬಹುಮತ ಸಾಬೀತಿಗೆ ಅವಕಾಶ ಕಲ್ಪಿಸಿಕೊಡಿ ಎಂದು ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.

ಇದೇ ವೇಳೆ, ಸುಪ್ರೀಂ ತೀರ್ಪು ಪ್ರಕಟವಾಗುವ ವಿಚಾರ ಗೊತ್ತಾಗುತ್ತಿ ದ್ದಂತೆಯೇ ಸೋಮವಾರ ಮತ್ತೆ ಗೋಲ್ಡನ್‌ ಬೇ ರೆಸಾರ್ಟ್‌ಗೆ ಧಾವಿಸಿದ ಶಶಿಕಲಾ, ರಾತ್ರಿ ಸುದ್ದಿಗೋಷ್ಠಿ ನಡೆಸಿದರು. “ನಾನು ಇಲ್ಲಿಗೆ ಆಗಮಿಸುತ್ತಿದ್ದಾಗ ನನ್ನನ್ನೊಂದು ಗುಡಿಸಲಿಗೆ ಕರೆಯಲಾಯಿತು. ಅಲ್ಲಿ ಅಮ್ಮನ ಫೋಟೋ ಇತ್ತು. ಅಮ್ಮ ಇರುವುದು ಜನರ ಹೃದಯದಲ್ಲಿ. ಅಮ್ಮಾ ಇನ್ನೂ ನಮ್ಮೆಲ್ಲರ ಹೃದಯದಲ್ಲಿ  ಬದುಕಿದ್ದಾರೆ‌’ ಎಂದರು. ಮಾತನಾ ಡುತ್ತಾ ಅವರು ಭಾವುಕರಾಗಿದ್ದೂ ಕಂಡುಬಂತು. ಜತೆಗೆ, ಸೋಮವಾರ ರಾತ್ರಿ ನಾನು ರೆಸಾರ್ಟ್‌ನಲ್ಲೇ ಉಳಿಯುವುದಾಗಿ ಹೇಳಿದರು. 

ಇದೇ ವೇಳೆ, ಡಿಎಂಕೆ ವಿರುದ್ಧ ಹರಿಹಾಯ್ದ ಅವರು, ಲೆಕ್ಕಾಚಾರದಲ್ಲಿ ಡಿಎಂಕೆ ಪಕ್ಷ ಬಹಳ ಪರಿಣತ. ಎಂಜಿಆರ್‌ ನಿಧನ ಹೊಂದಿದಾಗಲೂ ಆ ಪಕ್ಷ ಇದನ್ನೇ ಮಾಡಿತ್ತು ಎಂದು ಆರೋಪಿಸಿದರು. ಪನ್ನೀರ್‌ ಸೆಲ್ವಂ ಅವರು ಈಗ ಡಿಎಂಕೆ ಜತೆ ಸೇರಿ ಕೊಂಡಿದ್ದು ನಮಗೆ ಗೊತ್ತಾಯಿತು. ಇಲ್ಲದಿದ್ದರೆ, ಅವರು ಸಿಎಂ ಆಗಿ ಮುಂದುವರಿಯಲು ಅವಕಾಶ ನೀಡುತ್ತಿದ್ದೆ. ನನಗೇನೂ ಸಿಎಂ ಕುರ್ಚಿಯ ಆಸೆಯಿರಲಿಲ್ಲ ಎಂದರು.

ಸೆಲ್ವಂಗೆ ಹೆಚ್ಚಿದ ಬೆಂಬಲ: ಇದೇ ವೇಳೆ, ಸೋಮವಾರ ರಾತ್ರಿ ಪಕ್ಷದ ದಕ್ಷಿಣ ಮಧುರೆ ಶಾಸಕ ಶರವಣನ್‌ ಹಾಗೂ ಮಧುರೆ ಸಂಸದ ಆರ್‌. ಗೋಪಾಲಕೃಷ್ಣನ್‌ ಅವರು ಹಂಗಾಮಿ ಸಿಎಂ ಪನ್ನೀರ್‌ ಸೆಲ್ವಂಗೆ ಬೆಂಬಲ ಘೋಷಿಸಿದ್ದು, ಸೆಲ್ವಂಗೆ ಒಟ್ಟು 8 ಶಾಸಕರು ಹಾಗೂ 12 ಮಂದಿ ಸಂಸದರು ನಿಷ್ಠೆ ತೋರಿದಂತಾಗಿದೆ. ಇನ್ನೊಂದೆಡೆ, ಎಐಎಡಿಎಂಕೆ ವಕೀಲರ ಘಟಕದ ಬಹುತೇಕ ಮಂದಿ ಅಂದರೆ ಸುಮಾರು 200 ಮಂದಿ ವಕೀಲರು ಸೋಮವಾರ ಪನ್ನೀರ್‌ ಸೆಲ್ವಂಗೆ ಬೆಂಬಲ ಘೋಷಿಸಿದ್ದಾರೆ. ಎಂಜಿಆರ್‌ ಮತ್ತು ಜಯಲಲಿತಾ ಅವರು ಕಷ್ಟದಲ್ಲಿ ಪಕ್ಷವನ್ನು ಕಟ್ಟಿ, ಬೆಳೆಸಿದ್ದಾರೆ. ಯಾರಧ್ದೋ ಕೈಗೆ ಅಧಿಕಾರ ಹೋಗುವ ಮೂಲಕ ಅವರ ಶ್ರಮ ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ವಕೀಲರು ಹೇಳಿದ್ದಾರೆ. ಇದೇ ವೇಳೆ, ರಾಜ್ಯದ ರಾಜಕೀಯ ಬಿಕ್ಕಟ್ಟನ್ನೇ ಮುಂದಿಟ್ಟುಕೊಂಡು ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದ 60 ಮಂದಿ ಸಮಾಜಘಾತುಕರನ್ನು ಕಳೆದ ಎರಡು ದಿನಗಳಲ್ಲಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಸುಪ್ರೀಂಗೆ ಸ್ವಾಮಿ ಅರ್ಜಿ
ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಶಶಿಕಲಾಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಶಶಿಕಲಾ ಅವರಿಗೆ ಸರಕಾರ ರಚಿಸಲು ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ಸೂಚಿಸಬೇಕು ಎಂದು ಕೋರಿ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದ ಕೆಲವು ಸಚಿವರು ವಿನಾಕಾರಣ ತಮಿಳುನಾಡಿನ ರಾಜಕೀಯದಲ್ಲಿ ಮೂಗುತೂರಿಸುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಶಾಸಕರನ್ನು ಕೂಡಿಹಾಕಿಲ್ಲ:
ಹೈಕೋರ್ಟ್‌ಗೆ ಮಾಹಿತಿ ಶಶಿಕಲಾ ಅವರು ಶಾಸಕರನ್ನು ಕೂಡಿ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ತಮಿಳುನಾಡು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸೋಮವಾರ ಮದ್ರಾಸ್‌ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. 119 ಶಾಸಕರು ತಾವು ಸ್ವಂತ ಇಚ್ಛೆಯಿಂದ ರೆಸಾರ್ಟ್‌ನಲ್ಲಿ ತಂಗಿದ್ದಾಗಿ ಬರೆದುಕೊಟ್ಟ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಎಡಿಎಸ್‌ಪಿ, ನಾಲ್ವರು ಇನ್‌ಸ್ಪೆಕ್ಟರ್‌ಗಳು, ಹಲವು ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ ಇಬ್ಬರು ತಹಶೀಲ್ದಾರರು ಫೆ.11ರಂದು ರೆಸಾರ್ಟ್‌ಗೆ ತೆರಳಿ, ಅಲ್ಲಿನ ಶಾಸಕರನ್ನು ಭೇಟಿ ಮಾಡಿ, ಕೆಲವು ಪ್ರಶ್ನೆಗಳನ್ನು ಹಾಕಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ. ಈ ನಡುವೆ, ಪನ್ನೀರ್‌ಸೆಲ್ವಂ ಅವರಿಗೆ ಜೀವಬೆದರಿಕೆ ಹಾಕಿದ್ದ ಆರೋಪದಲ್ಲಿ ಶಶಿಕಲಾ ಆಪ್ತ, ಪಕ್ಷದ ಹಿರಿಯ ನಾಯಕ ವಿ ಪಿ ಕಳೈರಾಜನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಶಿಕಲಾ ಮಾಡಿದ 5 ತಪ್ಪುಗಳು
1. ಜಯಲಲಿತಾ ಅವರ ಸಾವಿನ ಕುರಿತು ಎದ್ದಿದ್ದ ಅನುಮಾನಗಳಿಗೆ ಉತ್ತರಿಸುವಲ್ಲಿ  ವಿಫ‌ಲರಾದದ್ದು.
2. ಅಮ್ಮಾ ಅವರು ಬರೆದಿದ್ದಾರೆ ಎನ್ನಲಾದ ವಿಲ್‌ನಲ್ಲಿನ ಮಾಹಿತಿಯನ್ನು ಬಹಿರಂಗಪಡಿಸದೇ ಇದ್ದದ್ದು
3. ಜಯಾ ಪಾರ್ಥಿವ ಶರೀರದ ಸುತ್ತಲೂ ತಮ್ಮದೇ ಕುಟುಂಬವನ್ನು ಇರಿಸಿಕೊಂಡಿದ್ದು ಮತ್ತು ಇತರರಿಗೆ ಅಲ್ಲಿರಲು ಅವಕಾಶ ನಿರಾಕರಿಸಿದ್ದು
4. ಮುಖ್ಯಮಂತ್ರಿ ಕುರ್ಚಿಗೇರಲು ಆತುರ ಪಟ್ಟದ್ದು. ಇದು ಪನ್ನೀರ್‌ ಸೆಲ್ವಂ ಪರ ಅನುಕಂಪದ ಅಲೆ ಮೂಡಿಸಿತು
5. ಪಕ್ಷದ ಕಾರ್ಯಕರ್ತರು ಮತ್ತು ಜನರ ಮನಸ್ಸಲ್ಲಿ ಪನ್ನೀರ್‌ ಸೆಲ್ವಂರ ಜನಪ್ರಿಯತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫ‌ಲರಾಗಿದ್ದು

ಏನಿದು ಅಕ್ರಮ ಆಸ್ತಿ ಕೇಸ್‌?
1991ರಿಂದ 1996ರ ಅವಧಿಯಲ್ಲಿ ಅಂದರೆ ಜಯಲಲಿತಾ ಅವರು ಮೊದಲ ಬಾರಿ ಸಿಎಂ ಆಗಿದ್ದ ಸಮಯದಲ್ಲಿ ಶಶಿಕಲಾ ಮತ್ತು ಅವರ ಸಂಬಂಧಿಕರಾದ ವಿ. ಎನ್‌. ಸುಧಾಕರನ್‌ ಮತ್ತು ಇಳವರಸಿ ತಮ್ಮ ಆದಾಯಕ್ಕೆ ಮೀರಿ 66.65 ಕೋ.ರೂ. ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪವಿದೆ. 2015ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ ಜಯಾ ಹಾಗೂ ಶಶಿಕಲಾರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಅದನ್ನು ಪ್ರಶ್ನಿಸಿ ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮಂಗಳವಾರ ಇದರ ಬಹುನಿರೀಕ್ಷಿತ ತೀರ್ಪನ್ನು ನ್ಯಾ| ಪಿ. ಸಿ. ಘೋಷ್‌ ಮತ್ತು ಅಮಿತಾವ ರಾಯ್‌ ಅವರ ಪೀಠವು ಪ್ರಕಟಿಸಲಿದೆ.

ತೀರ್ಪಿನ ಬಳಿಕ ಏನಾಗಬಹುದು?
– ತೀರ್ಪು ಶಶಿಕಲಾ ಪರ ಬಂದರೆ: ಸಿಎಂ ಆಗಿ ಪ್ರಮಾಣ ಸ್ವೀಕರಿಸುವುದಕ್ಕೆ ಶಶಿಕಲಾಗೆ ಯಾವ ಕಾನೂನಾತ್ಮಕ ಅಡ್ಡಿಯೂ ಇರುವುದಿಲ್ಲ. ಆದರೆ, ರಾಜಕೀಯ ಬಿಕ್ಕಟ್ಟು  ಎದುರಾಗಿರುವ ಕಾರಣ, ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ.
– ತೀರ್ಪು ಶಶಿಕಲಾ ವಿರುದ್ಧ ಬಂದರೆ: ಅಕ್ರಮ ಆಸ್ತಿ ಕೇಸಲ್ಲಿ ಶಶಿಕಲಾ ದೋಷಿ ಎಂದು ತೀರ್ಪು ಬಂದರೆ ಅವರು ಜೈಲು ಸೇರಬೇಕಾಗುತ್ತದೆ. ಅನಂತರ 6 ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಹೀಗಾಗಿ, ಅವರು ಸಿಎಂ ಸ್ಥಾನ ವಹಿಸಿಕೊಳ್ಳುವಂತೆ ಪಕ್ಷದ ಮತ್ತೂಬ್ಬ ನಾಯಕನಿಗೆ ಸೂಚಿಸಬಹುದು.

– ಸುಪ್ರೀಂ ಕೋರ್ಟ್‌ನ  ಇಂದಿನ ತೀರ್ಪಿನಲ್ಲಿದೆ ಶಶಿಕಲಾ ಭವಿಷ್ಯ
– ಖುಲಾಸೆಯಾದರೆ ಸಿಎಂ ಪಟ್ಟಕ್ಕೆ ಹತ್ತಿರ; ಇಲ್ಲದಿದ್ದರೆ ಜೈಲೇ ಗತಿ

Advertisement

Udayavani is now on Telegram. Click here to join our channel and stay updated with the latest news.

Next