ದಾವಣಗೆರೆ: ಮೇಲುಕೋಟೆ ಒಳಗೊಂಡಂತೆ 14 ವಿಧಾನ ಸಭಾ ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧೆ ಮಾಡಲು ದಾವಣಗೆರೆಯಲ್ಲಿ ಸೋಮವಾರ ನಡೆದ ರಾಜ್ಯ ರೈತ ಸಂಘ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ಪೂರ್ಣ ರಾಜ್ಯ ಸಮಿತಿ ಸಭೆ ನಿರ್ಧರಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಅಧ್ಯಕ್ಷ ಚಾಮರಸ ಮಾಲೀಪಾಟೀಲ್, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಮುಂದಿನ ಲೋಕಸಭೆ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪಧಿಸುವ ಮೂಲಕ ಅಧಿಕಾರಕ್ಕೆ ಬಂದು ರೈತರಿಗೆ ಒಳಿತು ಮಾಡುವ ಯೋಜನೆ ರೂಪಿಸುವ ನಿಟ್ಟಿನಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಮಂಡ್ಯ, ಬೆಳ್ತಂಗಡಿ, ಕಿತ್ತೂರು, ಮಾನ್ವಿ, ರಾಯಚೂರು ಗ್ರಾಮಾಂತರ, ಸವದತ್ತಿ, ಚಾಮರಾಜನಗರ, ಕೊಳ್ಳೆಗಾಲ, ಹನೂರು, ವಿರಾಜಪೇಟೆ, ಚಿತ್ರದುರ್ಗ, ಕಡೂರು, ಹಳಿಯಾಳ ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧೆ ಮಾಡಲಿದೆ. ಸ್ಪರ್ಧೆ ಮಾಡದ ಉಳಿದ ಕ್ಷೇತ್ರಗಳಲ್ಲಿ ಸಿಪಿಐ, ಸಿಪಿಐ(ಎಂ), ಸೂಸಿ ಪಕ್ಷಗಳಿಗೆ ಬೆಂಬಲ ನೀಡಲಾಗುವುದು. ಬಾಗೇಪಲ್ಲಿಯಲ್ಲಿ ಸಿಪಿಐ(ಎಂ), ಮೂಡಿಗೆರೆಯಲ್ಲಿ ಸಿಪಿಐಗೆ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:‘ದಿಲ್ ಮಾರ್’ಗೆ ನಾಯಕಿಯಾದ ಹಯಾತಿ
ಕಳೆದ ನಾಲ್ಕು ದಶಕಗಳಿಂದ ರೈತ ಸಂಘ ರೈತರ ಸಮಸ್ಯೆಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮತ್ತು ಚಳವಳಿ ನಡೆಸಿಕೊಂಡು ಬರುತ್ತಿದೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ರೈತರಿಗೆ ಅನುಕೂಲ ಆಗುವಂತಹ ಯಾವುದೇ ಕಾರ್ಯಕ್ರಮ, ಯೋಜನೆ ರೂಪಿಸುವುದಿಲ್ಲ. ರೈತ ವಿರೋಧಿ ನೀತಿಯನ್ನೇ ಅನುಸರಣೆ ಮಾಡುತ್ತಿವೆ. ಹಾಗಾಗಿ ರೈತರೇ ರಾಜಕೀಯ ಪ್ರವೇಶಿಸಿ, ಅಧಿಕಾರಕ್ಕೆ ಬಂದು ಇಡೀ ರೈತರಿಗೆ ಅನುಕೂಲ ಆಗುವ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ರಾಜಕಾರಣ ಪ್ರವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ವಿಧಾನ ಸಭೆ ಮಾತ್ರವಲ್ಲ ಮುಂದಿನ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧೆ ಮಾಡಲಿದೆ. ಪಾರದರ್ಶಿಕ, ಪ್ರಾಮಾಣಿಕ ಆಡಳಿತವನ್ನ ನೀಡಲಿದೆ ಎಂದು ತಿಳಿಸಿದರು.