ಮೈಸೂರು: ಮಹಿಳೆಯರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿದ್ದ ಸೀರೆ ನಡಿಗೆ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಹೆಜ್ಜೆಹಾಕಿದರು.
ಮೈಸೂರಿನ ಇನ್ನರ್‌ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಭಾನುವಾರ ನಡೆದ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ 500ಕ್ಕೂ ಹೆಚ್ಚು ಮಹಿಳೆಯರು 3 ಕಿ.ಮೀ. ವಾಕಥಾನ್‌ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ನಗರದ ಮಹಾರಾಜ ಜೂನಿಯರ್ ಕಾಲೇಜು ಮೈದಾನದಿಂದ ಮುಂಜಾನೆ 6ಕ್ಕೆ ಆರಂಭಗೊಂಡ ಸ್ಪರ್ಧೆಗೆ ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.
ಬಳಿಕೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರೊಂದಿಗೆ ಒಂದಿಷ್ಟು ದೂರ ಹೆಜ್ಜೆಹಾಕಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಪ್ರೋತ್ಸಾಹ ನೀಡಿದರು. ನಂತರ ಮಹಾರಾಜ ಕಾಲೇಜು ಮೈದಾನದಿಂದ ಹೊರಟ ಮಹಿಳೆಯರ ಸೀರೆ ನಡಿಗೆ ಮುಡಾ ವೃತ್ತ, ಸೀತಾವಿಲಾಸ ರಸ್ತೆ, ರಮಾವಿಲಾಸ ರಸ್ತೆ, ಸಂತೆಪೇಟೆ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಿ ಆರಂಭಿಕ ಸ್ಥಾನಕ್ಕೆ ಬಂದು ಸೇರಿತು.
ಮುಂಜಾನೆಯೇ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದ ಮಹಿಳೆಯರು, ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಪ್ರತಿನಿತ್ಯ ನಡೆಯುವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬ ಸಂದೇಶ ಸಾರದರು. ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡಿದ್ದ ಎ.ಜಿ.ಭಾರತಿ (ಪ್ರ), ಪಾರ್ವತಿ (ದ್ವಿ), ಲಕ್ಷಿ (ತೃ) ಹಾಗೂ ಅನಿತಾ(ಪ್ರ), ಶೋಭಾ (ದ್ವಿ), ಲವಿನಾ (ತೃ) ಬಹುಮಾನ ಪಡೆದರು. ಇವರೊಂದಿಗೆ 84 ವರ್ಷದ ಟಾಮಿ ದೇವಯ್ಯ ವಿಶೇಷ ಬಹುಮಾನ ಪಡೆದರು.
ನಾರಾಯಣ ಹೃದಯಾಲಯದ ಸ್ತ್ರೀರೋಗ ತಜ್ಞೆ ಡಾ.ಸವಿತಾ ನಾಯಕ್, ವಿಕಿರಣ ಅಂಕಾಲಜಿಸ್ಟ್ ಡಾ.ಆರ್.ವೇದಪ್ರಿಯ ಅವರು, ಮಹಿಳೆಯರ ಆರೋಗ್ಯ ರಕ್ಷಣೆ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.