ಬೆಂಗಳೂರು: ಮದುವೆಗೆ ಬಟ್ಟೆ ಖರೀದಿಸುವ ಸೋಗಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗಿದ್ದ ಆಂಧ್ರಪ್ರದೇಶ ಮೂಲದ ಮೂವರು ಮಹಿಳೆಯರು ಸೇರಿ ಆರು ಮಂದಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಅಶೋಕನಗರ ಠಾಣೆ ಪೊಲೀಸರು ಸೀರೆ ಕಳವು ಆರೋಪದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಸಾಧುಪಾಟಿ ರಾಣಿ (33), ಈಟಾ ಸುನೀತಾ (45), ಗುಂಜಿ ಶಿವರಾಮ್ ಪ್ರಸಾದ್ (34), ಕನುಮುರಿ ವೆಂಕಟೇಶ್ವರ ರಾವ್ (42), ತಣ್ಣೀರು ಶಿವಕುಮಾರ್ (33), ತೊತ್ತಕ್ಕ ಭರತ್ (30) ಬಂಧಿತರು. ಆರೋಪಿಗಳಿಂದ ನಾಲ್ಕು ಲಕ್ಷ ರೂ. ಮೌಲ್ಯದ 22 ಸೀರೆ ಮತ್ತು 1 ಬ್ಲೌಸ್ ಪೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಸ್ಯಾಂಕಿ ರಸ್ತೆ ರೈನ್ ಟ್ರೀ ಹೋಟೆಲ್‌ನ ಪೆನ್‌ರಿವ್ ಎಂಟರ್ ಪ್ರೈಸಸ್‌ನಲ್ಲಿ ಸಾವಿರಾರು ರೂ. ಮೌಲ್ಯದ ನಾಲ್ಕು ಸೀರೆ ಮತ್ತು ಬ್ಲೌಸ್ ಪೀಸ್‌ಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದಿಂದ ಕಾರುಗಳಲ್ಲಿ ಬರುವ ಆರೋಪಿಗಳು ಪ್ರತಿಷ್ಠಿತ ಸೀರೆ ಅಂಗಡಿಗಳಿಗೆ ಮದುವೆಗೆ ಬಟ್ಟೆ ಖರೀದಿ ಸೋಗಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸೀರೆಗಳನ್ನು ಅಂಗಡಿ ಸಿಬ್ಬಂದಿ ತೋರಿಸುತ್ತಿದ್ದಂತೆ, ಪುರುಷರು ಅವರ ಗಮನ ಬೇರೆಡೆ ಸೆಳೆಯುತ್ತಿದ್ದರು. ಆಗ, ಮಹಿಳೆಯರು ಸೀರೆಗಳನ್ನು ತಮ್ಮ ಬಟ್ಟೆಯ ಒಳಭಾಗದಲ್ಲಿ ಇರಿಸಿಕೊಂಡು, ಕೆಲ ಹೊತ್ತಿನ ಬಳಿಕ ಒಂದೆರಡು ಸೀರೆಗಳನ್ನು ಖರೀದಿಸಿ ವಾಪಸ್ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು. ಆರೋಪಿಗಳ ಕೃತ್ಯ ಸೀರೆ ಅಂಗಡಿಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಗಮನಿಸಿದ ಅಂಗಡಿ ಮಾಲೀಕರು ಹೈಗ್ರೌಂಡ್ಸ್ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ರತ್ನಲು ಬಂಧನ: ಆರೋಪಿಗಳ ಪೈಕಿ ರತ್ನಲು ಈ ಹಿಂದೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸೀರೆ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು, ಇದೀಗ ಈಕೆಯನ್ನು ಬಂಧಿಸಿ, ವಿಚಾರಣೆ ಮುಂದುವರಿಸಲಾಗಿದೆ. ಈಕೆ ಕೂಡ ಸಾಧುಪಾಟಿ ರಾಣಿ ತಂಡದಲ್ಲಿ ಸೇರಿಕೊಂಡು ಸೀರೆ ಕಳವು ಮಾಡುತ್ತಿದ್ದಳು. ಹೈಗ್ರೌಂಡ್ಸ್ ಠಾಣೆಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದರು.
ಕಡಿಮೆ ಮೊತ್ತಕ್ಕೆ ಮಾರಾಟ:
ಕದ್ದ ಸೀರೆಗಳನ್ನು ಆಂಧ್ರಪ್ರದೇಶದ ಕೆಲವೆಡೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶದ ಕೆಲ ಠಾಣೆಗಳ ವ್ಯಾಪ್ತಿಯಲ್ಲೂ ತಮ್ಮ ಕೈಚಳಕ ತೋರಿ ದ್ದಾರೆ. ಆಂಧ್ರಪ್ರದೇಶ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಠಾಣಾಧಿಕಾರಿ ಸಿ.ಬಿ.ಶಿವಸ್ವಾಮಿ, ಪಿಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.