ಕುಷ್ಟಗಿ:ರಾಜ್ಯದ ಯಾವೂದೇ ಭಾಗದಲ್ಲಿ ರಣರೋಚಕ ಟಗರಿನ ಕಾಳಗ ನಡೆದರೂ ಕುಷ್ಟಗಿಯನ್ನು ಪ್ರತಿನಿಧಿಸಿ ಗೆಲ್ಲುತ್ತಿದ್ದ “ಗಾಂಧಿ ನಗರದ ಗೂಳಿ” ಎಂದೇ ಪ್ರಖ್ಯಾತಿಯ ಟಗರು ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸಾವನ್ನಪ್ಪಿದೆ.
ಅಕಾಲಿಕವಾಗಿ ಸಾವನ್ನಪ್ಪಿದ ಟಗರು, ಬೆಂಚಮಟ್ಟಿ ಗ್ರಾಮದ ಜಂಬಣ್ಣ ಡೊಳ್ಳೀನ್ ಅವರ ಅಚ್ಚು ಮೆಚ್ಚಿನದಾಗಿತ್ತು. ಪ್ರಥಮ ಸ್ಥಾನ ಗಳಿಸುವ ಮೂಲಕ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಗಳಿಸಿತ್ತು. ಸದಾ ಗೆಲ್ಲುವ ಟಗರಿಗೆ 3 ಲಕ್ಷರೂಗೆ ಕೇಳಿದ್ದರೂ ಜಂಬಣ್ಣ ಡೊಳ್ಳೀನ್ ಕೊಟ್ಟಿರಲಿಲ್ಲ. ಕೊಡುವ ಮನಸ್ಸೂ ಅವರಿಗೆ ಇರಲಿಲ್ಲ.
ಟಗರಿನ ಕಾಳಗದಲ್ಲಿ ಗೆಲ್ಲುವ ಭರವಸೆ ಈ ಟಗರು 13ರಿಂದ 14 ಪ್ರಥಮ, ದ್ವಿತೀಯ ಬಹುಮಾನ ಹಾಗೂ ಲಕ್ಷಾಂತರ ರೂ.ಗಳಿಸಿತ್ತು ಹೀಗಾಗಿ ಇದಕ್ಕಿಂತ ಹೆಚ್ಚಾಗಿ ಅದರ ಪ್ರೀತಿಯಿಂದ ಸಾಕಿದ್ದ ಅವರು ಟಗರನ್ನು ಪ್ರಾಣಿ ಎಂದು ಭಾವಿಸದೇ ಮನೆಯ ಸದಸ್ಯನಂತೆ ಭಾವಿಸಿದ್ದರು.
ಅದರೆ ಇತ್ತೀಚೆಗೆ ತಮ್ಮ ಟಗರಿಗೆ ಹುಶಾರಿಲ್ಲದಿರುವುದಕ್ಕೆ ಸ್ಥಳೀಯ ಪಶು ಆಸ್ಪತ್ರೆಯಲ್ಲಿ ತೋರಿಸಿದ್ದರು. ಮೂತ್ರ ಬಂದ್ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಪಶು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಆದರೆ ಗಾಂಧಿ ನಗರ ಗೂಳಿ ಖ್ಯಾತೀಯ ಟಗರು ಇನ್ನಿಲ್ಲವಾಗಿರುವುದು ಜಂಬಣ್ಣ ಡೊಳ್ಳಿನ್ ಅವರು ಅವರ ಕುಟುಂಬಕ್ಕೆ ಅರಗಿಸಿಕೊಳ್ಳದಷ್ಟು ದುಃಖ ತಂದಿದೆ.
ಮನೆಯ ಸದಸ್ಯನನ್ನು ಕಳೆದುಕೊಂಡಷ್ಟು ದುಃಖ ಮಡುಗಟ್ಟಿದೆ. ಮೃತ ಟಗರನ್ನು ಊರಲ್ಲಿ ಎತ್ತಿನ ಬಂಡೆಯಲ್ಲಿ ಮೆರವಣಿಗೆ ಮಾಡಿ ಶಾಸ್ತೋಕ್ತವಾಗಿ ಅಂತಿಮ ಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಊರವರು ನೆರೆದು ಭಾರವಾದ ಹೃದಯದೊಂದಿಗೆ ಗಾಂಧಿ ನಗರದ ಗೂಳಿಗೆ (ಟಗರು) ಡೊಳ್ಳು ವಾದ್ಯ ಮೆರವಣಿಗೆಯ ಮೂಲಕ ಅಂತಿಮ ವಿದಾಯ ಸಲ್ಲಿಸಿದರು.
ಮಂಜುನಾಥ ಮಹಾಲಿಂಗಪುರ ಕುಷ್ಟಗಿ