ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ “ಸಾರಾ ವಜ್ರ’ ಹೆಸರಿನಲ್ಲಿ ಸಿನಿಮಾವಾಗಿದ್ದು, ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಇನ್ನು ಈ ಚಿತ್ರದ ಕಥೆ 1989ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣ ಚಿತ್ರದಲ್ಲಿದೆ.
ನಾಯಕಿ ಅನು ಪ್ರಭಾಕರ್ ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ಅಭಿನಯಿಸಿದ್ದು, 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಗಾಯಕಿ ಸುಹಾನಾ, ರೆಹಮಾನ್ ಹಾಸನ್, ಸುಧಾ ಬೆಳವಾಡಿ, ರಮೇಶ್ ಭಟ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ನರೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.
ಚಿತ್ರಕ್ಕೆ ಪರಮೇಶ್ ಸಿ. ಎಂ ಛಾಯಾಗ್ರಹಣವಿದೆ. “ಸಂಭ್ರಮ ಡ್ರೀಮ್ ಹೌಸ್’ ಮತ್ತು ಎಂ. ದೇವೇಂದ್ರ ರೆಡ್ಡಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.