ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳ ನಡುವೆ ಅವರು ಸ್ವಪಕ್ಷದ ಶಾಸಕ ಸಾ.ರಾ.ಮಹೇಶ್ ವಿರುದ್ಧ ಟೀಕೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಚ್.ಡಿ.ಕುಮಾರಸ್ವಾಮಿ ಇದ್ದರೆ ಮಾತ್ರ ಸಾ.ರಾ ಮಹೇಶ್ ಹೀರೋ, ಕುಮಾರಸ್ವಾಮಿ ಇಲ್ಲದಿದ್ದರೆ ಸಾ.ರಾ ಮಹೇಶ್ ಜೀರೋ ಲೇವಡಿ ಮಾಡಿದರು.
2018ರಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಮೊದಲ 12 ತಿಂಗಳು ಸಚಿವನಾಗಿದ್ದೆ. ಆ ಬಳಿಕ 28 ತಿಂಗಳಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇನ್ನುಳಿದ 20 ತಿಂಗಳ ಅವಧಿಗೂ ಶಾಸಕನಾಗಿಯೇ ಮುಂದುವರಿಯುತ್ತೇನೆ. ಇದರ ಜೊತೆಗೆ ಸಹಾಕಾರಿ ಮಹಾಮಂಡಲದ ಅಧ್ಯಕ್ಷನಾಗಿದ್ದೇನೆ. ಮುಂದೇನು ಮಾಡಬೇಕೆಂದು ನಿರ್ಧಾರ ಮಾಡಿಲ್ಲ ಎಂದರು.
ಇದನ್ನೂ ಓದಿ:ಜೆಡಿಎಸ್ ಪುನಃಶ್ಚೇತನಕ್ಕೆ ರಾಜ್ಯಾದ್ಯಂತ ಪ್ರವಾಸ : ಎಚ್.ಡಿ. ಕುಮಾರಸ್ವಾಮಿ
ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಯಕರು ಬಂದಿದ್ದು ನಿಜ. ಅವರು ನಾವು ಅಣ್ಣ ತಮ್ಮಂದಿರಂತೆ ಇದ್ದೇವೆ. ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಒಂದಾಗಿ ಬಂದಿದ್ದೇವೆ. ನೀವು ಸಹ ನಮ್ಮ ಜೊತೆಯೇ ಇರಬೇಕು ಎಂದು ಮಾತನಾಡಲು ಬಂದಿದ್ದರು. ಬಂದಿದ್ದ ವೇಳೆ ಅವರು ಸಹ ಅವರಿಗಾಗಿರುವ, ನೋವು ಅನುಭವಗಳನ್ನು ಹಂಚಿಕೊಂಡರು. ಬಳಿಕ ಮತ್ತೊಮ್ಮೆ ಬರುತ್ತೇವೆಂದು ಹೇಳಿ ಹೋದರು. ದೇವೇಗೌಡ ಕುಟುಂಬದ ಬಗ್ಗೆ ನನಗೆ ಅಪಾರ ಪ್ರೀತಿಯಿದೆ ಎಂದು ಜಿಟಿಡಿ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಗೌಡನಿಗೆ ಹುಣಸೂರಿನಲ್ಲಿ ಸ್ಪರ್ಧಿಸುವ ಅರ್ಹತೆಯಿತ್ತು. ಆದರೂ ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಕೊನೆಯಲ್ಲಿ ಎಚ್.ವಿಶ್ವನಾಥ್ ರನ್ನು ತಂದು ನಿಲ್ಲಿಸಿದರು. ಆಗಲೂ ನಾನು ನನ್ನ ಪತ್ನಿ ಮಗ ಎಲ್ಲರೂ ಓಡಾಡಿ ವಿಶ್ವನಾಥ್ ರನ್ನು ಗೆಲ್ಲಿಸಿದೆವು. ಕಳೆದ ಹುಣಸೂರು ಉಪ ಚುನಾವಣೆಯಲ್ಲಿ ಹರೀಶ್ ಗೌಡರನ್ನು ನಿಲ್ಲಿಸುತ್ತೇವೆಂದರು. ಆಗ ನಾನು ಬೇಡ ಅಲ್ಲಿ ಶೆಟ್ಟರು ಗೆದ್ದಾಗಿದೆ ಎಂದೆ. ಆ ಕೂಡಲೇ ಅಲ್ಲಿಂದ ವಾಪಸ್ ಬಂದೆ ಎಂದು ಜಿ ಟಿ ದೇವೇಗೌಡ ಹೇಳಿದರು.