ಮಂಗಳೂರು: ಖ್ಯಾತ ಸಾಹಿತಿ, ಮಹಿಳಾ ಪರ ಹೋರಾಟಗಾರ್ತಿ ಸಾರಾ ಅಬೂಬಕರ್ ಅವರಿಗೆ ನುಡಿನಮನ ಕಾರ್ಯಕ್ರಮ ರವಿವಾರ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರಗಿತು.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಅವರು ನುಡಿನಮನ ಸಲ್ಲಿಸುತ್ತ, ನಾವು ನಮ್ಮ ಸುತ್ತ ಎಂದಿಗೂ ಬೇಲಿ ಹಾಕಿಕೊಳ್ಳಬಾರದು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎನ್ನುವುದು ಸಾರಾ ಅವರ ನಿಲುವಾಗಿತ್ತು. ಅವರು ನುಡಿದಂತೆಯೇ ನಡೆದರು ಎಂದು ಹೇಳಿದರು.
ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ ಪ್ರೊ| ನರೇಂದ್ರ ನಾಯಕ್ ಅವರು ಮಾತನಾಡಿ, ಸಾರಾ ಅವರು ಪ್ರತಿಯೋರ್ವರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದರು. ಅವರ ನಡೆನುಡಿ ಆತ್ಮೀಯ ಎಂದು ಹೇಳಿದರು.
ಕರಾವಳಿ ಲೇಖಕಿಯರು, ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾçರು ಮಾತನಾಡಿ, ಸಾರಾ ಅವರು ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಹೊಂದಿದ್ದರು. ಅವರು ಅನ್ಯಾಯದ ವಿರುದ್ಧ ಮೌನ ಮುರಿದು ಮಾತನಾಡುತ್ತಿದ್ದರು ಎಂದು ಹೇಳಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನಿವೃತ್ತ ಪ್ರಾಚಾರ್ಯ ಡಾ| ಇಸ್ಮಾಯಿಲ್ ಮೊದಲಾದವರು ನುಡಿನಮನ ಸಲ್ಲಿಸಿದರು. ವಾಸುದೇವ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು.