Advertisement

ಹಲಗಲಿಯಲ್ಲಿ ಹಾಳಾಗಿ ಹೋದವೇ ಸಸಿಗಳು

10:48 AM Jun 07, 2022 | Team Udayavani |

ಮುಧೋಳ: ಪರಿಸರ ದಿನ ಅಂಗವಾಗಿ ನೆಡುವ ಸಸಿಗೆ ಒಂದು ದಿನದ ಹಬ್ಬದಂತಾಗಿದೆ ಇಂದಿನ ಸನ್ನಿವೇಶ. ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿ ಸಸಿಗಳನ್ನು ನೆಟ್ಟು ಫೋಟೋ ತೆಗೆದುಕೊಳ್ಳುವ ಮಹಾಶಯರು ಮರುದಿನ ಅವುಗಳತ್ತ ತಿರುಗಿಯೂ ನೋಡಲ್ಲ. ಇದರಿಂದಾಗಿ ತಿಂಗಳುಗಟ್ಟಲೆ ಶ್ರಮ ಹಾಕಿ ಬೆಳೆಸಿರುವ ಸಸಿಗಳು ಹಾಳಾಗಿ ಹೋಗುತ್ತಿವೆ.

Advertisement

ಮೇಲಿನ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ತಾಲೂಕಿನ ಹಲಗಲಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸಸಿಗಳು ಹಾಳಾಗಿದ್ದು, ಈಚೆಗೆ ಬೆಳಕಿಗೆ ಬಂದಿದೆ.

ಕಳೆದ ವರ್ಷ ಪರಿಸರ ದಿನಾಚರಣೆಯಂದು ಗ್ರಾಮದ ವಿವಿಧೆಡೆ ನೆಡಲು ಅಲ್ಲಿನ ಪಂಚಾಯಿತಿ ವತಿಯಿಂದ ನೂರಾರು ಸಸಿ ತರಿಸಲಾಗಿತ್ತು. ಅವುಗಳಲ್ಲಿ ಕೆಲವೊಂದು ಸಸಿಗಳನ್ನು ಬಳಕೆ ಮಾಡಿಕೊಂಡು ನೂರಕ್ಕೂ ಹೆಚ್ಚು ಸಸಿಗಳನ್ನು ಹಾಳು ಮಾಡಲಾಗಿದೆ.

ಇತ್ತೀಚೆಗೆ ಹಲಗಲಿ ಗ್ರಾಮದ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಅವರು ಪ್ರಾಥಮಿಕ ಆರೋಗ್ಯ ಕೆಂದ್ರದ ಹಳೆಯ ಕಟ್ಟಡದಲ್ಲಿ ಹಾಳಾಗಿದ್ದ ಸಸಿಗಳನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದು ಕೇವಲ ಹಲಗಲಿ ಗ್ರಾಮದ ಉದಾಹರಣೆಯಷ್ಟೇ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿಯೂ ಇಂದು ಪ್ರಚಾರದ ಗೀಳಿಗೆ ಹೆಚ್ಚಿನ ಪ್ರಮಾಣದ ಸಸಿಗಳನ್ನು ಕೊಂಡೊಯ್ದು ಹಾಳು ಮಾಡಲಾಗುತ್ತದೆ.

ಕಡಿವಾಣ ಹಾಕಿದ ಅರಣ್ಯ ಇಲಾಖೆ: ಪ್ರತಿ ವರ್ಷ ಸಸಿಗಳು ಹಾಳಾಗುವುದರ ಬಗ್ಗೆ ಗಮನಿಸುತ್ತಿದ್ದ ಸಾಮಾಜಿಕ ಅರಣ್ಯ ಇಲಾಖೆ ಅಧಿ ಕಾರಿಗಳು ಈ ಬಾರಿ ಸಸಿ ಹಂಚುವ ಕಾರ್ಯದಲ್ಲಿ ಕಟ್ಟುನಿಟ್ಟಿನ ಸೂತ್ರ ಅನುಸರಿಸುತ್ತಿದ್ದಾರೆ.

Advertisement

ಸಸಿಗಾಗಿ ಬೇಡಿಕೆಯಿಡುವವರ ಪೂರ್ವಾಪರ ಯೋಚಿಸಿ ಅವುಗಳನ್ನು ಬಳಸಿಕೊಂಡು ಸರಿಯಾದ ರೀತಿಯಲ್ಲಿ ಬೆಳೆಸಿ ಎಂಬ ಸಂದೇಶ ಸಾರುತ್ತಿರುವ ಅರಣ್ಯಾ ಧಿಕಾರಿಗಳು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಸಿ ವಿತರಿಸಿರುವುದಾಗಿ ತಿಳಿಸಿದ್ದಾರೆ.

ಬೇಕಿದೆ ಕಾನೂನು: ಬೆಳೆದ ಮರದ ಉಳುವಿಗಾಗಿ ಶ್ರಮಿಸುವ ಅರಣ್ಯ ಇಲಾಖೆ ಅಂತಹ ಮರಗಳನ್ನು ಅನುಮತಿಯಿಲ್ಲದೆ ಕತ್ತರಿಸಿದರೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುತ್ತದೆ. ಅದೇ ರೀತಿ ಅನಗತ್ಯವಾಗಿ ಸಸಿಗಳನ್ನು ಹಾಳು ಮಾಡುವವರ ವಿರುದ್ಧವೂ ಕಠಿಣ ಕ್ರಮ ಜಾರಿಯಾದರೆ ಸಸಿಗಳು ಹಾಳಾಗುವುದನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಪರಿಸರ ದಿನ ಎಂಬುದು ಕೇವಲ ಜೂ.5ಕ್ಕೆ ಮಾತ್ರ ಸೀಮಿತವಾಗಬಾರದು. ಅಂದು ನಾವು ನೆಡುವ ಸಸಿಯನ್ನು ಬೆಳೆಸಿ ಮರವನ್ನಾಗಿಸಿದರೆ ನಮ್ಮ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಸಾರ್ವಜನಿಕರು ಬೆಳೆಸುವ ಸಸಿಗಳನ್ನು ಜತನದಿಂದ ಬೆಳೆಸಬೇಕು. –ಕಿರಣ ಘೋರ್ಪಡೆ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ

ಈ ಮೊದಲು ಹೆಚ್ಚಿನ ಸಸಿಗಳನ್ನು ಕೊಟ್ಟ ಪರಿಣಾಮ ಅನೇಕ ಕಡೆಗಳಲ್ಲಿ ಸಸಿ ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಸಸಿ ವಿತರಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಕೊಟ್ಟ ಸಸಿಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ಆಗಲಿದೆ. -ಪವನ ಕುರನಿಂಗ, ವಲಯ ಅರಣ್ಯಾಧಿಕಾರಿ,ಸಾಮಾಜಿಕ ಅರಣ್ಯ ವಿಭಾಗ

ಸಸಿಗಳು ಮಕ್ಕಳಿಗೆ ಸಮ ಅವುಗಳನ್ನು ಹಾಳು ಮಾಡುವುದು ಸರಿಯಲ್ಲ. ಪರಿಸರ ದಿನಾಚರಣೆ ನೆಪದಲ್ಲಿ ಅವುಗಳನ್ನು ನೆಟ್ಟು ಕಡೆಗಣಿಸುವುದಕ್ಕಿಂತ ಪ್ರತಿದಿನ ಅವುಗಳನ್ನು ಉಳಿಸಿ ಬೆಳೆಸಿದರೆ ಸುಂದರ ಸ್ವತ್ಛ ಪರಿಸರ ನಿರ್ಮಿಸಬಹುದು. –ಯಲ್ಲಪ್ಪ ಶಿಂಧೆ, ಪರಿಸರ ಪ್ರೇಮಿ, ಮುಧೋಳ 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next