ಬೆಂಗಳೂರು: “ಸಿಎಂ ನನಗೆ ಒನ್ ಟು ಒನ್ ಇದ್ದಾರೆ, ನನಗೆ ‘ಸರ್’ ಎಂದು ಕರೆಯುತ್ತಾರೆ” ಎಂದಿರುವ ವೇಶ್ಯಾವಾಟಿಕೆ ದಂಧೆಯ ಆರೋಪಿ ಸ್ಯಾಂಟ್ರೋ ರವಿಗೂ ನಿಮಗೂ ಸಂಬಂಧವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಸೇ ಸಿಎಂ ಅಭಿಯಾನ ಆರಂಭಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಿಎಂ ಪುತ್ರ ‘ಸ್ವೀಟ್ ಬ್ರದರ್’ ಆಗಿ ಆತ್ಮೀಯತೆ ಹೊಂದಿರುವುದು ಆತನ ಹೇಳಿಕೆಗೆ ಪುರಾವೆ ಒದಗಿಸುತ್ತದೆ. ರಾಜಾರೋಷವಾಗಿ ವರ್ಗಾವಣೆ ಡೀಲ್ ಮಾಡುವ ಈತನೊಂದಿಗೆ ಬಸವರಾಜ ಬೊಮ್ಮಾಯಿ ಅವರಿಗಿರುವ ಸಂಬಂಧವೇನು ಎಂದು ಪ್ರಶ್ನಿಸಿದೆ.
ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ ಪಿಎಸ್ಐಹಗರಣದ ತನಿಖೆ ಕೆಲವೇ ಜನರ ಬಂಧನಕ್ಕೆ ಸೀಮಿತವಾಗಿತ್ತು. ಈಗ ಬಂಧಿತ ಆರೋಪಿಗಳಿಗೆ ಜಾಮೀನು ದೊರಕಿದೆ. ಆಡಿಯೋ ಒಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಗಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಗೃಹಸಚಿವರು ಒಪ್ಪಿದ್ದರು.ಇದು ವೈಫಲ್ಯವೋ, ಉದ್ದೇಶಪೂರ್ವಕ ಸಹಕಾರವೋ ಅರಗ ಜ್ಞಾನೇಂದ್ರ ಅವರೇ ಎಂದು ಕೇಳಿದೆ.
ಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರೇ,’ಸಿಎಂ ನೇರ ಪರಿಚಯ ನನಗೆ’ ಎಂದು ರವಿ ಹೇಳಿದ್ದು ಹೇಗೆ? ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ ‘ಸ್ವೀಟ್ ಬ್ರದರ್’ ಆಗಿರುವುದು ಹೇಗೆ? ನಿಮ್ಮ ಸರ್ಕಾರದ ಬಹುತೇಕ ಸಚಿವರಿಗೆ ಆಪ್ತನಾಗಿರುವ ಸ್ಯಾಂಟ್ರೋ ರವಿ ನಿಮಗೂ ಆಪ್ತನಲ್ಲವೇ? ತಾವು ಆತನಿಗೆ ಸಾರ್ ಎಂದು ಸಂಬೋಧಿಸುವುದಿಲ್ಲವೇ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇದನ್ನೂ ಓದಿ:ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್ ಸಮಸ್ಯೆ
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ? ಸಚಿವ ಸುಧಾಕರ್ ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು? ಬೊಮ್ಮಾಯಿ ಕೃಪೆಯೇ? ಜ್ಞಾನೇಂದ್ರ ಕೃಪೆಯೇ? ಎಂದು ಟೀಕಿಸಿದೆ.