Advertisement

ಪಡುಬಿದ್ರೆಯಲ್ಲಿ ಸಂತೋಷ್‌ ಶೆಟ್ಟಿ ಅವರಿಗೆ ಸಮ್ಮಾನ

03:08 PM Apr 23, 2019 | Vishnu Das |

ಮುಂಬಯಿ: ನಾವು ನೋಡುವನೋಟ ಮತ್ತು ಮಾಡುವ ಕ್ರಿಯೆ ಸಕಾರಾತ್ಮಕವಾಗಿದ್ದರೆ ಎಲ್ಲವೂ ಸುಸೂತ್ರವೆನಿಸುತ್ತದೆ ಎಂದು ಬೆಂಗಳೂರು ಎಂಆರ್‌ಐ ಗ್ರೂಪ್ಸ್‌ನ ಸಿಎಮ್‌ಡಿ ಕೆ. ಪ್ರಕಾಶ್‌ ಶೆಟ್ಟಿ ಹೇಳಿದರು.

Advertisement

ಎ. 21ರಂದು ರಾತ್ರಿ ಪಡುಬಿದ್ರಿ ಬಂಟರ ಭವನದಲ್ಲಿ ಪಡುಬಿದ್ರಿ ಬಂಟರ ಯಾನೆ ನಾಡವರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಮಾಜ ಬಾಂಧವರು ಸಂಘ-ಸಂಸ್ಥೆಗಳ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ವಿನಂತಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರು ಪಡುಬಿದ್ರಿ ಬಂಟರ ಸಂಘದ ನೂತನ ಅಧ್ಯಕ್ಷ ಡಾ| ದೇವಿ ಪ್ರಸಾದ್‌ ಶೆಟ್ಟಿ ಬೆಳಪು ಅವರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಪಡುವಿತ್ಲು ಮತ್ತು ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿಯವರಿಗೆ ಮಂಗಳೂರು ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ ಪ್ರಮಾಣವಚನ ಬೋಧಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್‌. ಶೆಟ್ಟಿಯವರಿಗೆ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾ ಕೆ. ಶೆಟ್ಟಿ ಪ್ರಮಾಣವಚನ ಬೋಧಿಸಿದರು.

ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡಾ| ದೇವಿ ಪ್ರಸಾದ್‌ ಶೆಟ್ಟಿ ಮಾತನಾಡಿ, ಸಂಘದ 9ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅತೀವ ಹರ್ಷವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಸ್ವಯಂ ಭೇಟಿ ನೀಡಿ, ಪ್ರತಿಯೊಬ್ಬ ಬಂಟರೂ ಸಂಘಕ್ಕೆ ಸದಸ್ಯರಾಗಲು ಪ್ರೇರೇಪಿಸಲಾಗುವುದು. ಅದೇ ರೀತಿ ಸಮಾಜದ ಅಶಕ್ತರನ್ನು, ವಸತಿ ರಹಿತರನ್ನು,ಅನಾರೋಗ್ಯಪೀಡಿತರನ್ನು ಮತ್ತು ಪ್ರಾಯಕ್ಕೆ ಬಂದರೂ ಮದುವೆಯಾಗಲು ಅಸಾಧ್ಯವಾದವರನ್ನು ಗುರುತಿಸಿ ಅವರಿಗೆ ಪ್ರಾಮಾಣಿಕ ಸಹಾಯ ಮಾಡಲಾಗುವುದು. ಸಂಘದಲ್ಲಿ ದಿ| ಜಗನ್ನಾಥ ಶೆಟ್ಟಿ ಸ್ಮಾರಕ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗುವುದು. ಯುವಕರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಬಂಟ ಯುವ ವಿಭಾಗವನ್ನು ಪ್ರಾರಂಭಿಸಲಾಗುವುದು. ಸಂಘದ ಸಭಾಂಗಣವನ್ನು ಹವಾನಿಯಂತ್ರಿತಗೊಳಿಸಲಾಗುವುದು ಮತ್ತು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು.ಮುಖ್ಯವಾಗಿ ಬಂಟ ಗ್ರಾಮ ಸಭೆಗಳನ್ನು ಆಯೋಜಿಸಲಾಗುವುದು ಎಂದರು.

ಸಮಾರಂಭದಲ್ಲಿ ನೂತನ ಅಧ್ಯಕ್ಷ ಡಾ| ದೇವಿ ಪ್ರಸಾದ್‌ ಶೆಟ್ಟಿ ಮತ್ತು ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ ಪುಣೆಯವರನ್ನು ಕುಟುಂಬ ಸದಸ್ಯರ ಉಪಸ್ಥಿತಿಯೊಂದಿಗೆ ಸಮ್ಮಾನಿಸಲಾಯಿತು. ಬಂಟ ಸಮಾಜದ ಸಮಗ್ರ ಮಾಹಿತಿಯುಳ್ಳ ಬಂಟವಾಣಿ ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ ಶೆಟ್ಟಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಮುಂಬಯಿ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯ ಎಂಡಿ ಕೃಷ್ಣ ವೈ. ಶೆಟ್ಟಿ, ಸಾಯಿರಾಧಾ ಗ್ರೂಪ್ಸ್‌ನ ಸಿಎಂಡಿ ರವಿ ಸುಂದರ ಶೆಟ್ಟಿ, ದಕ್ಷಿಣ ಭಾರತ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್‌ ಆಳ್ವ, ಪಡುಬಿದ್ರಿ ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ವೈ. ಶಶಿಧರ್‌ ಶೆಟ್ಟಿ, ಬಂಟರ ಸಂಘದ ಸಿರಿಮುಡಿ ದತ್ತಿನಿಧ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ ಜಿ. ಹೆಗ್ಡೆ, ಸುರೇಶ್‌ ಶೆಟ್ಟಿ ಮತ್ತು ನವೀನ್‌ಚಂದ್ರ ಜೆ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್‌. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಅಕ್ಷತಾ ಸುರೇಂದ್ರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ನಿರ್ಗಮನ ಕಾರ್ಯದರ್ಶಿ ಡಾ| ಮನೋಜ್‌ ಕುಮಾರ್‌ ಶೆಟ್ಟಿ, ಕೋಶಾಧಿಕಾರಿ, ರವಿ ಶೆಟ್ಟಿ ಗುಂಡ್ಲಾಡಿ, ನಿರ್ಗಮನ ಕೋಶಾಧಿಕಾರಿ ಶರತ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಡಾ| ಮನೋಜ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಅರ್ಪಿತಾ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್‌ ಶೆಟ್ಟಿ ಪಡುಹಿತ್ಲು ವಂದಿಸಿದರು. ಈ ಸಂದರ್ಭ ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next