ಧಾರವಾಡ: ರಾಜ್ಯ ಒಲಿಂಪಿಕ್ಸ್‌ನ ಕುಸ್ತಿ ಕೂಟದ ವೇಳೆ ತೀವ್ರ ಗಾಯಗೊಂಡು ಮೃತಪಟ್ಟ ಚಿಕ್ಕಮಲ್ಲಿಗವಾಡದ ಕುಸ್ತಿಪಟು ಸಂತೋಷ ಹೊಸಮನಿ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಧನ ಘೋಷಣೆಯಾಗಿದೆ. ಸ್ವತಃ ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯಿಂದ 2 ಲಕ್ಷ ರೂ.ಗಳ ಚೆಕ್ ಬಂದಿದೆ. ನಗರ ಪಾಲಿಕೆ ವತಿಯಿಂದ 2 ಲಕ್ಷ ರೂ.ಗಳ ಚೆಕ್ ಬರಬೇಕಿದೆ. ಇದಲ್ಲದೇ ಸರಕಾರ ಘೋಷಿಸಿದ್ದ 5 ಲಕ್ಷ ರೂ. ಚೆಕ್ ಕೂಡ ಸಿದ್ಧವಾಗಿದೆ. ಒಟ್ಟು 9
ಲಕ್ಷ ರೂ. ಕುಟುಂಬ ವರ್ಗಕ್ಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿಗಳು
ಮೊನ್ನೆ ಹುಬ್ಬಳ್ಳಿಗೆ ಬಂದಾಗ ಒಟ್ಟು 10 ಲಕ್ಷರೂ. ನೀಡಲು ಸೂಚಿಸಿದ್ದಾರೆ. ಹೀಗಾಗಿ ಸರ್ಕಾರದಿಂದ ಇನ್ನೂ ಒಂದು ಲಕ್ಷ ರೂ.ಹೆಚ್ಚು ನೀಡಲಿದ್ದೇವೆ. ಒಟ್ಟು 10 ಲಕ್ಷ ರೂ. ಗಳ ಚೆಕ್‌ನ್ನು ಅವರ ಕುಟುಂಬಕ್ಕೆ ಶೀಘ್ರದಲ್ಲೇ ನೀಡುವುದಾಗಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.
ಹೊಸಮನಿ ಅವರ ಕುಟುಂಬಕ್ಕೆ ಜೀವವಿಮಾ ಕಂಪನಿಯಿಂದಲೂ ಹಣ ಕೊಡಿಸಲು ಯತ್ನಿಸಲಾಗುವುದು. ಕ್ರೀಡಾಕೂಟದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿಗಳ ಹಾನಿಗಾಗಿ ವಿಮೆ ಮಾಡಿಸಿದ್ದರಿಂದ ವೈಯಕ್ತಿಕವಾಗಿ ಅದನ್ನು ಪಡೆಯಲು ಅವಕಾಶವಿಲ್ಲ. ಹೀಗಿದ್ದರೂ ಕಂಪನಿ ಅವರೊಂದಿಗೆ ಹಣ ನೀಡುವ ಸಾಧ್ಯತೆ ಇದೆಯೇ ಎಂಬುದರ ಕುರಿತು ಚರ್ಚಿಸಲಾಗಿದೆ. ಅವರೂ ತಮಗೆ ಸಾಧ್ಯವಾದಷ್ಟು ಪ್ರಯತ್ನಿಸುವುದಾಗಿ ವಿಮಾ ಕಂಪನಿ ತಿಳಿಸಿದೆ ಎಂದರು.
ವೈದ್ಯರ ತಪ್ಪಿಲ್ಲ: ಫೆ.8ರಂದು ಸಂತೋಷ ಎಸ್ ಡಿಎಂ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯವರು ಹಣ ಪಾವತಿಸುವಂತೆ ತಿಳಿಸಿಲ್ಲ. ಕುಟುಂಬದವರೂ ಹಣ ಪಾವತಿಸಿಲ್ಲ. ಅಂದು ಸಂಜೆ 6 ಗಂಟೆಗೆ ದಾಖಲಾದ ಸಂತೋಷನನ್ನು ವೈದ್ಯರು ಸಂಪೂರ್ಣವಾಗಿ ಪರೀಕ್ಷೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಬೇಕಿರುವ ಕಾರಣ, ಸುಮಾರು 7 ಗಂಟೆಗೆ ವೈದ್ಯರು ಕುಟುಂಬದವರೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಎದುರಾಗುವ ಹಲವು ತೊಂದರೆಗಳ ಕುರಿತು ಮಾಹಿತಿ ನೀಡಿದ್ದಾರೆ.
ಆದರೆ ಕುಟುಂಬಸ್ಥರು ಎಸ್‌ಡಿಎಂನಲ್ಲಿ ಚಿಕಿತ್ಸೆ ಪಡೆಯುವುದಿಲ್ಲ ಎಂದು ಹೇಳಿ ಕಿಮ್ಸ್‌ಗೆ ತೆರಳಿದ್ದಾರೆ. ಈ ಕುರಿತು ಆಸ್ಪತ್ರೆ ಅವರ ಕೇಸ್ ಶೀಟ್‌ನಲ್ಲಿ ಕುಟುಂಬಸ್ಥರು ಸಹಿ ಮಾಡಿದ್ದಾರೆ. ಕಿಮ್ಸ್‌ನಲ್ಲಿ ಅವರು ದಾಖಲಾದ ದಿನದಿಂದ ಎಲ್ಲ ಸಂಪೂರ್ಣ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ದಾಖಲೆ ಸಮೇತ ವಿವರಿಸಿದರು.
ಮೂಳೆ ಮುರಿತದಿಂದ ಊತ ಉಂಟಾದ ಕಾರಣ ಅದು ಕಡಿಮೆ ಆಗುವವರೆಗೆ ಕಾಯ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೀಗಾಗಿ ಫೆ.13ರಂದು ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಇಬ್ಬರು ಆಥೋì ಪ್ರೊಫೆಸರ್, ಇಬ್ಬರು ಸಹಾಯಕ ಪ್ರಾಧ್ಯಾಪಕರು ಹಾಗೂ ಅರವಳಿಕೆ ವಿಭಾಗದ ಎಚ್‌ಒಡಿ ಹಾಜರಿದ್ದರು.