Advertisement

ಸಂತೆಮರಹಳ್ಳಿ- ಮೂಗೂರು ರಸ್ತೆ ದುರಸ್ತಿಗೆ ಆಗ್ರಹ

09:52 PM Sep 17, 2019 | Team Udayavani |

ಸಂತೆಮರಹಳ್ಳಿ: ಸಂತೆಮರಹಳ್ಳಿ ಗ್ರಾಮದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮೂಗೂರು ಕ್ರಾಸ್‌ವರೆಗಿನ ರಸ್ತೆಯನ್ನು ದುರಸ್ತಿಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಉಪ್ಪಾರ, ಎಸ್ಟಿ ಹೋರಾಟ ಸಮಿತಿ, ರೈತ ಸಂಘ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಸದಸ್ಯರು ರಸ್ತೆತಡೆ ನಡೆಸಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಸಮೀಪದ ಕಾವುದವಾಡಿ ಗೇಟ್‌ನಿಂದ ಸಂತೆಮರಹಳ್ಳಿ ಸರ್ಕಲ್‌ವರೆಗೆ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಮೆರವಣಿಗೆ ಮೂಲಕ ಪ್ರತಿಭಟನಾಕಾರರು ಸಾಗಿದರು. ಈ ಸಂದರ್ಭದಲ್ಲಿ ಕೆಲ ಕಾಲ ರಸ್ತೆತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳಪೆ ಕಾಮಗಾರಿ: ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ಈ ರಸ್ತೆ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಹಳ್ಳಬಿದ್ದಿದೆ. ಪ್ರತಿನಿತ್ಯ ಹಲವರು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಹಲವು ಬಾರಿ ಇದಕ್ಕೆ ತೇಪೆ ಹಾಕುವ ಕೆಲಸವಾಗಿದೆ. ಆದರೆ ಇದು ಹಾಳಾಗಿದ್ದು ಸಂಪೂರ್ಣ ರಸ್ತೆ ಹದಗೆಟ್ಟಿದೆ ಎಂದು ಆರೋಪಿಸಿದರು.

ಹೊಸ ರಸ್ತೆ ನಿರ್ಮಾಣ ಮಾಡಿ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಆಯತಪ್ಪಿದರೆ ರಸ್ತೆ ಬದಿಗೆ ವಾಹನ ಸವಾರರು ಬೀಳುವ ಅಪಾಯವೂ ಇದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ 209 ಹಾಗೂ 212 ನ್ನು ಬೆಸೆಯುವ ಲಿಂಕ್‌ ರಸ್ತೆಯಾಗಿದ್ದು ಇದರ ಅಭಿವೃದ್ಧಿಗೆ ಸಂಬಂಧಪಟ್ಟ ಶಾಸಕರು ಸಂಸದರು ತಲೆಕಡಿಸಿಕೊಂಡಿಲ್ಲ. ಇದಕ್ಕೆ ಮತ್ತೆ ರಿಪೇರಿ ಮಾಡುವ ಬದಲು ಹೊಸ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಉಗ್ರ ಹೋರಾಟದ ಎಚ್ಚರಿಕೆ: ರಾಜ್ಯ ಉಪ್ಪಾರ ಎಸ್‌ಡಿ ಹೋರಾಟ ಸಮಿತಿ ಅಧ್ಯಕ್ಷ ಬಾಗಳಿರೇವಣ್ಣ ಮಾತನಾಡಿ, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿಕೊಳ್ಳಬೇಕು. ಇದನ್ನು ಸಂಪೂರ್ಣವಾಗಿ ಹೊಸ ರಸ್ತೆ ನಿರ್ಮಾಣ ಮಾಡಬೇಕು. ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

6 ತಿಂಗಳಲ್ಲಿ ಹೊಸ ರಸ್ತೆ ನಿರ್ಮಾಣ: ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ವೀರಭದ್ರಯ್ಯ ಮಾತನಾಡಿ, ಈ ರಸ್ತೆಯನ್ನು ಹೊಸದಾಗಿ ನಿರ್ಮಿಸಲು ಹೆಚ್ಚು ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳ ಅವಧಿಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಇದಕ್ಕೆ ನಾನೇ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇನೆ.

ಆದರೆ ಅಲ್ಲಿಯ ವರೆಗೆ ರಸ್ತೆ ರಿಪೇರಿಗೆ ಆದ್ಯತೆ ನೀಡಲಾಗುವುದು. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಹಳ್ಳಗಳನ್ನು ಮುಚ್ಚಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು. ಈ ಕಾಮಗಾರಿಯನ್ನು ಇನ್ನೆರಡು ದಿನದಲ್ಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ಲೋಕೋಪಯೋಗಿ ಇಲಾಖೆಯ ಚೆನ್ನವೀರೇಗೌಡ, ಗ್ರಾಪಂಸದಸ್ಯ ಎಂ.ಪಿ.ಶಂಕರ್‌, ಸಂತೆಮರಹಳ್ಳಿರಾಜು, ಬಸವಣ್ಣ, ಕಾವುದವಾಡಿ ಲೋಕೇಶ್‌, ಚಿನ್ನಸ್ವಾಮಿ, ಶಿವಮಲ್ಲಪ್ಪ, ಅಶೋಕ್‌, ಶ್ರೀಕಂಠಮೂರ್ತಿ, ಶ್ರೀಕಂಠಸ್ವಾಮಿ, ಬಸವರಾಜು, ನಟರಾಜು, ಕೆಂಪರಾಜು, ಕಮರವಾಡಿರೇವಣ್ಣ, ಸಿದ್ದು, ಶಿವಶಂಕರ್‌, ನಾಗೇಂದ್ರಕುಮಾರ್‌, ಮಾದೇಶ್‌, ಶಿವಕುಮಾರ್‌, ಮಹದೇವು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next