ಇತ್ತೀಚಿನ ವರ್ಷಗಳಲ್ಲಿ ಕ್ರಿಸ್ಮಸ್ ವಾಣಿಜ್ಯೀಕರಣಗೊಂಡಂತೆ, ಸಾಂತಾಕ್ಲಾಸ್‌ನ ಪ್ರಭಾವ ಹೆಚ್ಚಾಗುತ್ತಿದೆ. ಹಲವರು ಕ್ರಿಸ್ಮಸ್ ಯೇಸು ಸ್ವಾಮಿಯ ಹುಟ್ಟುಹಬ್ಬವೆಂಬುದನ್ನು ಮರೆತು, ಸಾಂತಾಕ್ಲಾಸ್‌ನೇ ಕ್ರಿಸ್ಮಸ್‌ನ ಕೇಂದ್ರಬಿಂದು ಎಂಬಂತೆ ಸಂಭ್ರಮಿಸುತ್ತಾರೆ.
Advertisement
ಯಾರು ಈ ಸಾಂತಾಕ್ಲಾಸ್?ಡೊಳ್ಳು ಹೊಟ್ಟೆಯ, ನೀಳ ಬಿಳಿ ಗಡ್ಡದ, ಕೆಂಪು ಬಟ್ಟೆಗಳನ್ನು ಧರಿಸಿ ಬೆನ್ನ ಮೇಲೊಂದು ಮೂಟೆಯನ್ನು ಹೊತ್ತು ಕುಣಿಯುತ್ತಾ ಬರುವ ವೃದ್ಧ ಸಾಂತಾ ಕ್ಲಾಸ್ ಅಬಾಲ ವೃದ್ಧರೊಡಗೂಡಿ ಎಲ್ಲರ ಮುಖದ ಮೇಲೆ ಮಂದಹಾಸ ಮೂಡಿಸುತ್ತಾನೆ. ಈತನು ಕ್ರಿಸ್ಮಸ್ ಕಾಲದಲ್ಲಿ ಆಟಿಕೆ, ಬಹುಮಾನ-ಉಡುಗೊರೆಗಳನ್ನು ಪವಾಡಸದೃಶ ರೀತಿಯಲ್ಲಿ ತರುತ್ತಾನೆ ಎಂಬುದು ಮಕ್ಕಳ ನಂಬಿಕೆ.
ಈತ ಮೂಲತಃ ಕ್ರಿಸ್ತಶಕ ಮೂರನೇ ಶತಮಾನದಲ್ಲಿ ಮಕ್ಕಳಿಗೆ ಪ್ರೀತಿಪಾತ್ರನಾದ ನಿಕೋಲಸ್ ಎಂಬ ಕ್ರೈಸ್ತ ಪಾದ್ರಿ. ಕ್ರಿಸ್ತಶಕ 280ರಲ್ಲಿ ಈಗಿನ ಟರ್ಕಿಯಲ್ಲಿ ಜನಿಸಿದನು. ತನ್ನ ಸಜ್ಜನಿಕೆ ಹಾಗೂ ಉದಾರತೆಗಾಗಿ ಹೆಸರುವಾಸಿಯಾಗಿದ್ದ ನಿಕೋಲಸ್ ಬಗ್ಗೆ ಅನೇಕ ಕಥೆಗಳಿವೆ. ಆತ ತನ್ನೆಲ್ಲ ಪಿತ್ರಾರ್ಜಿತ ಆಸ್ತಿಯನ್ನು ಬಡಬಗ್ಗರಿಗೆ ಹಂಚಿ, ಅಶಕ್ತರಿಗೆ ನೆರವಾಗುತ್ತ ಊರೂರು ಸಂಚರಿಸಿದ. ವೇಶ್ಯಾವಾಟಿಕೆಗೆ ಮಾರಾಟ ವಾಗು ವುದರಲ್ಲಿದ್ದ ಮೂವರು ಹೆಣ್ಣುಮಕ್ಕಳನ್ನು ಆತನು ರಕ್ಷಿಸಿ ಅವರ ವರದಕ್ಷಿಣೆಗಾಗಿ ಬೇಕಾದ ದುಡ್ಡನ್ನು ಒದಗಿಸಿ ಅವರ ವಿವಾಹಕ್ಕೆ ನೆರವಾದ. ಇಂತಹ ನಿಕೋಲಸ್‌ನನ್ನು ಜನರು “ಮಕ್ಕಳ ಹಾಗೂ ನಾವಿಕರ ರಕ್ಷಕ’ ಎಂದು ಕರೆಯತೊ ಡಗಿದರು. ಆತನ ಸಜ್ಜನಿಕೆಯ ಜೀವನಕ್ಕಾಗಿ ಮರಣಾನಂತರ ಧರ್ಮಸಭೆಯು ಆತನಿಗೆ ಸಂತ ಪದವಿಯನ್ನು ನೀಡಿ ಗೌರವಿಸಿತು.
Related Articles
Advertisement
1890 ರಲ್ಲಿ “ಸಾಲ್ವೇಶನ್ ಆರ್ಮಿ’ ಎಂಬ ಸಮಾಜಸೇವಾ ಸಂಸ್ಥೆಯು ಬಡ ಕುಟುಂಬಗಳಿಗೆ ಕ್ರಿಸ್ಮಸ್ ಭೋಜನವನ್ನು ಒದಗಿಸಲು ದೇಣಿಗೆ ಸಂಗ್ರಹಿಸಿತು. ಆ ಸಂಸ್ಥೆಯು ನಿರುದ್ಯೋಗಿ ಪುರುಷರನ್ನು ಸಾಂತಾಕ್ಲಾಸ್‌ನಂತೆ ಸಿದ್ಧಪಡಿಸಿ ದೇಣಿಗೆಯನ್ನು ಸಂಗ್ರಹಿಸಲು ಕಳುಹಿಸಿತು. ಈ ಸಂಪ್ರದಾಯ ಹಲವು ವರ್ಷಗಳ ಕಾಲ ಮುಂದುವರಿಯಿತು.
ಬಹುಶಃ ಸಾಂತಾಕ್ಲಾಸ್‌ನ ವ್ಯಕ್ತಿತ್ವ ಬೆಳೆಯಲು ಅರಂಭ ವಾಗಿದ್ದು 1947ರಲ್ಲಿ ನಿರ್ಮಾಣಗೊಂಡ “ಮಿರಕಲ್ ಆನ್ 31 ಸ್ಟ್ರೀಟ್’ ಎಂಬ ಹಾಲಿವುಡ್ ಸಿನೆಮಾದೊಂದಿಗೆ. ಆ ಚಲನಚಿತ್ರದಲ್ಲಿ ಪುಟ್ಟ ಹುಡುಗಿಯೊಬ್ಬಳು ಕ್ರಿಸ್ ಕ್ರಿಂಗಲ್ ಎಂಬವನನ್ನು ನಿಜವಾದ ಸಾಂತಾಕ್ಲಾಸ್ ಎಂದು ನಂಬುತ್ತಾಳೆ. ಎಡ್ಮಂಡ್ ಗ್ವೇನ್ ಈ ಚಿತ್ರದ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ. 1994ರಲ್ಲಿ ಇದೇ ಚಿತ್ರದ ಪುನರ್ನಿರ್ಮಾಣಗೊಂಡಿತು. 1947 ರ ಬಳಿಕ ಚಲನಚಿತ್ರ ಪಾತ್ರಧಾರಿಯ ರೂಪದಲ್ಲೇ ಸಾಂತಾಕ್ಲಾಸ್ ಜನಪ್ರಿಯನಾಗಿ ಮಕ್ಕಳಿಗೆ ಚಿರಪರಿಚಿತನಾದ.
1822ರಲ್ಲಿ ಕ್ಲೆಮೆಂಟ್ ಕ್ಲಾರ್ಕ್ ಮೂರ್ ಎಂಬ ಪ್ರೊಟೆಸ್ಟೆಂಟ್ ಪಾದ್ರಿಯೊಬ್ಬ ಸಂತ ನಿಕೋಲಸ್ ರಕ್ಷಿಸಿದ ಮೂವರು ಹೆಣ್ಣುಮಕ್ಕಳ ಬಗ್ಗೆ ಕವಿತೆಯೊಂದನ್ನು ರಚಿಸಿದ. “ಇಟ್ ವಾಸ್ ದ ನೈಟ್ ಬಿಫೋರ್ ಕ್ರಿಸ್ಮಸ್’ ಎಂಬ ಹೆಸರಿನ ಆ ಕವಿತೆಯಲ್ಲಿ ಆಧುನಿಕ ರೂಪದ ಸಾಂತಾಕ್ಲಾಸ್ ಹುಟ್ಟಿದ. ಕ್ರಿಸ್ಮಸ್ ಸಂಜೆ ಅಲೌಕಿಕ ಸಾಮರ್ಥಯವುಳ್ಳವನಾಗಿ, ಅಡುಗೆ ಮನೆಯ ಹೊಗೆ ಕೊಳವೆಯಿಂದ ಆಶ್ಚರ್ಯಕರವಾಗಿ ಇಳಿದು ಕಾಣಿಸಿಕೊಂಡು ಆಟಿಕೆ ಇನ್ನಿತರ ಉಡುಗೊರೆಗಳನ್ನು ಗುಪ್ತವಾಗಿ ಇರಿಸಿ ಎಂಟು ಹಿಮಸಾರಂಗಗಳ ರಥವನ್ನೇರಿ ಮಾಯವಾಗುವವನು ಸಾಂತಾಕ್ಲಾಸ್ ಎಂದು ಕವಿತೆಯಲ್ಲಿ ಉಲ್ಲೇಖ. 1881ರಲ್ಲಿ ತೊಮಾಸ್ ನಾಸ್ಟ್ ಎಂಬ ಚಿತ್ರಕಾರ ಕ್ಲಾರ್ಕ್ ಮೂರ್‌ನ ಕವಿತೆಯನ್ನು ಬಣ್ಣಗಳಲ್ಲಿ ಚಿತ್ರಿಸಿದ. ಉದ್ದವಾದ ಶ್ವೇತ ಗಡ್ಡವನ್ನು ಹೊಂದಿರುವ ಹಸನ್ಮುಖೀಯ ಬೆನ್ನಮೇಲೆ ಉಡುಗೊರೆಗಳ ಚೀಲವನ್ನು ಹೊತ್ತುಕೊಂಡಿರುವ ಸಾಂತಾಕ್ಲಾಸ್‌ನನ್ನು ಚಿತ್ರಿಸಿದ. ಉಣ್ಣೆಯ ಕೆಂಪು ದಿರಿಸನ್ನು ನೀಡಿದವನು ತೊಮಾಸ್ ನಾಸ್ಟನೇ.
ಕ್ರಿಸ್ಮಸ್ ಮತ್ತು ಸಾಂತಾಕ್ಲಾಸ್ಕ್ರಿಸ್ಮಸ್ – ದೇವರು ತನ್ನ ಏಕೈಕ ಪುತ್ರನನ್ನೇ ಲೋಕಕಲ್ಯಾಣ ಕ್ಕಾಗಿ ಕಾಣಿಕೆಯಾಗಿ ನೀಡಿದ ಪವಿತ್ರ ಘಟನೆಯ ಆಚರಣೆ. ಆದ್ದರಿಂದ ಕಾಣಿಕೆ ಹಾಗೂ ಉಡುಗೊರೆಗಳನ್ನು ನೀಡು ವುದು ಈ ಹಬ್ಬದ ಅವಿಭಾಜ್ಯ ಅಂಗ. ನಾಲ್ಕನೇ ಶತಮಾನ ದ ಸಜ್ಜನ ಸಂತ ನಿಕೋಲಸ್ ಜನರ ಆಚರಣೆಯಲ್ಲಿ ಹಾಗೂ ಆಲೋಚನೆಯಲ್ಲಿ ಉಡುಗೊರೆ ನೀಡುವ ಸಾಂತಾಕ್ಲಾಸ್ ಆಗಿ ಇಂದಿಗೂ ಉಳಿದಿದ್ದಾನೆ. ಕಾಣಿಕೆಗಳನ್ನು ನೀಡುವ ನಮ್ಮ ಒಳ್ಳೆಯತನದ ಮೂಲಕ ಆತನು ಜೀವ ತಳೆಯುತ್ತಾನೆ. ಮನುಜ ಕುಲಕ್ಕಾಗಿ ಧರೆಗಿಳಿದ ದೇವ ಕುಮಾರ ಯೇಸು ಪ್ರಭುವಿನ ಜನ್ಮದಿನವಾದ ಕ್ರಿಸ್ಮಸ್‌ನ ಸಂಭ್ರಮ, ಸಡಗರಗಳನ್ನು ಸಾಂತಾಕ್ಲಾಸ್ ವೃದ್ಧಿಸುತ್ತಾನೆ. – ಫಾದರ್ ಚೇತನ್
ಸಾರ್ವಜನಿಕ ಸಂಪರ್ಕಾಧಿಕಾರಿ, ಧರ್ಮಪ್ರಾಂತ ಉಡುಪಿ