ಧಾರವಾಡ: ಅದ್ಭುತ ಜ್ಞಾನ ಭಂಡಾರ ಒಳಗೊಂಡಿರುವ ಸಂಸ್ಕೃತ ಭಾಷೆ ಪ್ರಪಂಚದ ಶ್ರೇಷ್ಠ ಭಾಷೆಗಳಲ್ಲೊಂದಾಗಿದ್ದು, ಈ ಭಾಷೆ ಯಾರೊಬ್ಬರ ಸ್ವತ್ತಾಗಬಾರದು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಸಂಸ್ಕೃತ ನಾಟಕೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಒಂದು ವರ್ಗದವರ ಭಾಷೆ ಎಂದು ಭಾವಿಸಿದ್ದು ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ. ಸಂಸ್ಕೃತ ಭಾಷೆ ಇಂದಿಗೂ ಮಠ, ಮಾನ್ಯಗಳಲ್ಲಿ ಸಿಲುಕಿಕೊಂಡಿದೆ. ಇಂಥ ಸಂಗತಿಗಳನ್ನು ಪ್ರಶ್ನಿಸುವುದೇ ದೊಡ್ಡ ಅಪರಾಧ ಎನ್ನುವಂತಾಗಿದೆ. ಸಂಸ್ಕೃತ ಭಾಷೆ ಈ ನಿಯಂತ್ರಣದಿಂದ ಹೊರಬಂದು ಸಮಾಜದ ಭಾಷೆಯಾಗಿ ಬೆಳೆಯಬೇಕಿದೆ ಎಂದರು.
ನೂರಾರು ವರ್ಷಗಳಿಂದ ಸಂಸ್ಕೃತ ಭಾಷೆಯನ್ನು ಒಂದು ವರ್ಗದವರು ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಮತ್ತು ಅದನ್ನು ದೇವರ ಭಾಷೆ ಎಂದು ಕರೆಯುವ ಮೂಲಕ ಜನಸಾಮಾನ್ಯರಿಂದ ದೂರವಿಟ್ಟಿರುವುದು ದುರಂತ. ಹೀಗಾಗಿ ಈ ಭಾಷೆಯನ್ನು ಸಾರ್ವತ್ರಿಕ ಭಾಷೆಯನ್ನಾಗಿಸುವ ಕೆಲಸ ನಡೆಯಬೇಕಿದೆ.
ಸಂಸ್ಕೃತವನ್ನು ಸಾಧ್ಯವಾದಷ್ಟು ಕನ್ನಡ ಭಾಷೆ ಮೂಲಕ ಕಲಿಸಲು ಸರ್ಕಾರದ ಜೊತೆ ವಿದ್ವಾಂಸರು ಕೂಡ ಪ್ರಯತ್ನಿಸಬೇಕಿದೆ. ಪಾಠ, ಪ್ರವಚನ ನೀಡುವುದರಿಂದ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಸಂಸ್ಕೃತ ವಿವಿ ನಾಟಕಗಳ ಮೂಲಕ ಸಂಸ್ಕೃತ ಭಾಷೆಯನ್ನು ಜನರಿಗೆ ತಿಳಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಬೆಂಗಳೂರಿನ ಮಹಾಬೋಧಿ-ಥೇರಾವಾದ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ವಿ. ರಾಜಾರಾಮ್ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿನ ಜ್ಞಾನ ಭಂಡಾರ ಎಲ್ಲ ಭಾಷೆಗಳಿಗೂ ಬರಬೇಕು. ಅದೊಂದು ನಶಿಸಿ ಹೋಗುವ ಭಾಷೆ ಎಂದು ನಿರ್ಲಕ್ಷ್ಯ ವಹಿಸಿದರೆ ಭಾಷೆ ಉಳಿಯುವುದು ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ವಿವಿ ಕುಲಪತಿ ಪ್ರೊ| ಪದ್ಮಾ ಶೇಖರ ಮಾತನಾಡಿ, 2000 ವರ್ಷ ಹಳೆಯ ಯೋಗವನ್ನು ಪ್ರಸ್ತುತ 200 ದೇಶಗಳು ಅಳವಡಿಸಿಕೊಂಡು ಆರೋಗ್ಯ ಸುಧಾರಿಸುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸಂಸ್ಕೃತದಲ್ಲಿನ ಅಪಾರ ಜ್ಞಾನ ಎಲ್ಲರಿಗೂ ತಿಳಿಸುವ ಕೆಲಸವನ್ನು ವಿವಿ ಮಾಡುತ್ತಿದೆ ಎಂದರು. ಡಾ| ವಿ. ಗಿರೀಶಚಂದ್ರ ಸ್ವಾಗತಿಸಿದರು. ವಿದುಷಿ ಶಕುಂತಲಾ ಭಟ್ಟ ಮತ್ತು ವಿ| ಸೂರ್ಯನಾರಾಯಣ ಭಟ್ಟ ನಿರೂಪಿಸಿದರು. ಪಿ.ಆರ್. ಪಾಗೋಜಿ ವಂದಿಸಿದರು.