Advertisement

ಕೋಟಿ ರೂ. ವ್ಯಯಿಸಿದರೂ ರಸ್ತೆಯಾಗದೆ ಸಂಕಷ್ಟ

08:31 PM Sep 12, 2020 | mahesh |

ಕಾರ್ಕಳ: ನಿಟ್ಟೆ ಮತ್ತು ಸಾಣೂರು ಗ್ರಾ.ಪಂ ವ್ಯಾಪ್ತಿಯ ಪ್ರದೇಶಗಳಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕಲ್ಕಾರ್‌ ಬಳಿ ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ಸಹಿತ ಸೇತುವೆ ನಿರ್ಮಾಣವಾಗಿದೆ. ಆದರೇ ಇದಕ್ಕೆ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ವಾಹನ ಓಡಾಟ ಸಾಧ್ಯವಾಗಿಲ್ಲ.
ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಕಲ್ಕಾರ್‌ನಲ್ಲಿ ಶಾಂಭವಿ ನದಿಗೆ ವೆಂಟೆಡ್‌ ಡ್ಯಾಮ್‌ ಸಹಿತ ಸೇತುವೆ 1 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಸಣ್ಣ ನೀರಾವರಿ ಇಲಾಖೆ ಇದಕ್ಕೆ ಅನುದಾನ ನೀಡಿತ್ತು. ಈ ಸೇತುವೆ-ಡ್ಯಾಂನಿಂದ ನಿಟ್ಟೆ ಹಾಗೂ ಸಾಣೂರು ಗ್ರಾ.ಪಂ. ಜನರಿಗೆ ಪ್ರಯೋಜನವಿದೆ. 6 ವರ್ಷಗಳ ಹಿಂದೆ ಸೇತುವೆ ನಿರ್ಮಾಣವಾದಾಗ ಜನ ಓಡಾಟದ ಸಮಸ್ಯೆ ನಿವಾರಣೆಯಾಯಿತು ಎಂದು ಸಂಭ್ರಮಪಟ್ಟಿದ್ದರು. ಆದರೆ ಸಂಪರ್ಕ ರಸ್ತೆಯಾಗದೇ ಇರುವುದು ಅವರ ಆಸೆಗೆ ತಣ್ಣೀರೆರೆಚಿದೆ.

Advertisement

ಸಂಪರ್ಕ ಕೊಂಡಿ
ನಿಟ್ಟೆ ಕಲ್ಕಾರ್‌ ಅರ್ಬಿ ಪ್ರದೇಶ ಸ್ವಾತಂತ್ರ್ಯ ಪೂರ್ವದಿಂದಲೂ ಸಾಣೂರು, ಅತ್ತೂರು, ನಿಟ್ಟೆ, ಪರಪಾಡಿ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿದ್ದು ಜನರು ನದಿ ದಾಟಬೇಕಿತ್ತು. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಂಡು ಸುತ್ತು ಬಳಸಿ ಹೋಗಬೇಕಿತ್ತು. ಕಲ್ಕಾರ್‌ ಸೇತುವೆ ನಿರ್ಮಾಣದಿಂದ ಸರ್ವಋತು ಸಂಪರ್ಕ ಸಾಧ್ಯವಾಗಿದೆ. ಆದರೆ ಇಲ್ಲಿ ವಾಹನ ಸಂಚಾರ ಸಾಧ್ಯವಾಗದೇ ಇರುವುದು ಸಮಸ್ಯೆಯಾಗಿದೆ. ಸಂಪರ್ಕ ರಸ್ತೆಯಾಗಿಸುವ ಕುರಿತು ಹಲವು ಭಾರಿ ಪ್ರಯತ್ನ ನಡೆಸಲಾಗಿತ್ತು. ಒಂದಷ್ಟು ತೊಡಕುಗಳಿರುವುದರಿಂದ ಸಮಸ್ಯೆಯಾಗಿತ್ತು ಎಂದು ಸಾಣೂರು ಗ್ರಾ.ಪಂ. ಅಧ್ಯಕ್ಷರಾದ ನರಸಿಂಹ ಕಾಮತ್‌ ಹೇಳುತ್ತಾರೆ.

ಈಗ ಸುತ್ತು ಬಳಸುವ ದಾರಿ
ಈಗ ಸೇತುವೆ ಸಂಪರ್ಕಕ್ಕೆ ಬೇಕಾಗಿರು ವುದು ಕೇವಲ 500 ಮೀ. ರಸ್ತೆ. ಇಷ್ಟು ಸಂಪರ್ಕವಾದರೆ ಸಾಣೂರು ಪಡ್ಡಾಯಿಗುಡ್ಡೆ ಲಿಂಕ್‌ ದೊರೆತು ನಿಟ್ಟೆ, ಅತ್ತೂರು,ಪರಪ್ಪಾಡಿ, ಸಾಣೂರು, ಚಾರಡಿ ಈ ಭಾಗದ ಹಲವು ಕುಟುಂಬಗಳಿಗೆ ಅನುಕೂಲವಾಗಲಿದೆ. ಸಂಪರ್ಕ ರಸ್ತೆ ಆಗದೇ ಇರುವುದರಿಂದ ಜನರು ಸಾಣೂರು ನಿಟ್ಟೆಗೆ ಕಾರ್ಕಳ ಬೈಪಾಸ್‌ ಅಥವಾ ಕುಂಟಲ್ಪಾಡಿ ರಸ್ತೆ ಮೂಲಕ ಸುತ್ತು ಬಳಸಿ ಹೋಗುತ್ತಿದ್ದಾರೆ.

ಅರ್ಬಿಗೆ ಹತ್ತಿರ
ಸಾಣೂರು ಪಡ್ಡಯಿಗುಡ್ಡೆ ರಸ್ತೆ ಅಭಿವೃದ್ಧಿಯಾಗಿ ಸಂಪರ್ಕ ರಸ್ತೆಯಾದರೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ಇದು ಅರ್ಬಿ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ಉಪಯುಕ್ತ ವಾಗಲಿದೆ. ಇತ್ತೀಚಿನ ದಿನಗಳಲ್ಲಿ ಅರ್ಬಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.

ಸ್ಥಳದ ಸ್ಪಷ್ಟತೆ ಇಲ್ಲ
ಸ್ಥಳದ ಬಗ್ಗೆ ಸ್ಪಷ್ಟವಾಗಿ ಗೊತ್ತಾಗುತಿಲ್ಲ. ಖಾಸಗಿ ಜಾಗದ ಸಮಸ್ಯೆ ಇದ್ದಲ್ಲಿ ರಸ್ತೆ ಆಗದೇ ಇರಲೂ ಬಹುದು ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ.
-ಶೇಖರ್‌, ಪಿಡಿಒ ನಿಟ್ಟೆ ಗ್ರಾ.ಪಂ.

Advertisement

ಬೇರೆ ವ್ಯಾಪ್ತಿ
ರಸ್ತೆ ಬೇಡಿಕೆ ಬಗ್ಗೆ ಇರುವ ಪ್ರದೇಶವು ಸಾಣೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಸಾಧ್ಯತೆ ಕಡಿಮೆ. ಈ ಬಗ್ಗೆ ಪರಿಶೀಲಿಸುವೆ.
-ಮಧು, ಪಿಡಿಒ ಸಾಣೂರು, ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next