Advertisement

ಬೆಲೆ ಏರಿಕೆ ನಡುವೆ ಸಂಕ್ರಾಂತಿ ಸಂಭ್ರಮ

11:32 AM Jan 14, 2023 | Team Udayavani |

ದೇವನಹಳ್ಳಿ: ಸತತ ಮಳೆ ಮತ್ತು ಬೆಲೆ ಏರಿಕೆ ನಡುವೆಯೂ ಸುಗ್ಗಿಹಬ್ಬ ಸಂಕ್ರಾಂತಿಗೆ ಸಿದ್ಧತೆಗಳು ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯಾಗಿದ್ದರೂ, ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

Advertisement

ಬೆಲೆ ಏರಿಕೆಗೂ ಜಗ್ಗದೇ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ನಾಗರಿಕರು ಸಕಲ ಸಿದ್ಧತೆ ನಡೆಸುತ್ತಿದ್ದು, ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು, ಹೂವು ಹಾಗೂ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ, ಗ್ರಾಹಕರು ಖರೀದಿ ಮಾಡಿದರು. ಈಗಾಗಲೇ ಮಾರುಕಟ್ಟೆಗೆ ಗೆಣಸು, ಕಬ್ಬು, ಅವರೇಕಾಯಿ, ಕಡಲೇಕಾಯಿ, ಹೂಹಣ್ಣು, ಎಳ್ಳುಬೆಲ್ಲ ದಾಳಿ ಮಾಡಿದ್ದು, ಖರೀದಿ ಭರಾಟೆಯೂ ಜೋರಾಗಿದೆ.

ಹಬ್ಬದ ದಿನದಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ ದಿಂದ ಸಂಕ್ರಾಂತಿ ಹಬ್ಬದ ಕಳೆಯನ್ನೇ ಕಿತ್ತುಕೊಂಡಿತ್ತು. ಈ ಬಾರಿ ಕೊರೊನಾ ಇಳಿಮುಖ ಆಗಿದ್ದು, ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಹಬ್ಬ ಕಳೆಗಟ್ಟುವಂತೆ ಮಾಡಲಾಗುತ್ತಿದೆ. ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ಈ ಬಾರಿ ಮಾರುಕಟ್ಟೆಗೆ ಅವರೇಕಾಯಿ ಮತ್ತು ಕಡಲೇಕಾಯಿ ಕಡಿಮೆ ಪ್ರಮಾಣದಲ್ಲಿ ಬಂದಿದ್ದು, ಬೆಲೆಯೂ ಹೆಚ್ಚಳವಾಗಿದೆ. ಕಳೆದ ಕೆಲ ದಿನಗಳಿಂದ ನೂರು ರೂ.ಗೆ ಎರಡು ಕೆ.ಜಿ. ಮಾರಾಟವಾಗುತ್ತಿದ್ದ ಅವರೇಕಾಯಿ ಒಂದೂವರೆ ಕೆ.ಜಿ.ಗೆ 100 ರೂ.ಗಳಿಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ವಾಹನಗಳ ದಟ್ಟಣೆ: ಹಬ್ಬದ ದಿನದಂದು ಕಡಲೆಕಾಯಿ ಮತ್ತು ಅವರೆಕಾಯಿ ಬೇಯಿಸಿ ತಿನ್ನುವ ಸಂಪ್ರದಾಯವಿದ್ದು, ಕಬ್ಬು, ಗೆಣಸು, ಎಳ್ಳು-ಬೆಲ್ಲ ಹಂಚುತ್ತಾರೆ. ಕಡಲೇಕಾಯಿ ಕೆ.ಜಿ.ಗೆ 150 ರೂಪಾಯಿ, ಸೊಗಡು ಅವರೇಕಾಯಿ 70 ರೂ., ಕಬ್ಬು ಒಂದು ಜೊಲ್ಲೆಗೆ 60 ರೂ., ಗೆಣಸು 40 ರೂ.ಗಳಂತೆ ಮಾರಾಟವಾಗುತ್ತಿದ್ದು, ಹೂವು, ಹಣ್ಣು ಬೆಲೆ ಗಗನಕ್ಕೇರಿದೆ. ಹಬ್ಬದ ವಿಶೇಷಕ್ಕಾಗಿ ಗ್ರಾಹಕರು ಉತ್ಸಹದಿಂದ ವ್ಯಾಪಾರ ನಡೆಸುತ್ತಿದ್ದರು. ಬಜಾರ್‌ ರಸ್ತೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಬ್ಬು, ಕಡಲೇಕಾಯಿ, ಗೆಣಸು ಹಾಗೂ ಇತರೆ ಪೂಜಾ ಸಾಮಾಗ್ರಿ ಖರೀದಿಸಲು ಹಲವಾರು ಜನರು ಬರುತ್ತಿರುವುದರಿಂದ ವಾಹನಗಳ ದಟ್ಟಣೆಯಿಂದ ಟ್ರಾಫಿಕ್‌ ಹೆಚ್ಚಾಗಿತ್ತು.

ರಾಸುಗಳಿಗೆ ಸಿಂಗಾರ, ಧಾನ್ಯಗಳಿಗೆ ಪೂಜೆ :

Advertisement

ಗ್ರಾಮೀಣ ಪ್ರದೇಶಗಳಲ್ಲಿ ರಾಸುಗಳಿಗೆ ಸಿಂಗಾರ ಮಾಡಿ, ಮೆರವಣಿಗೆ ಮಾಡುವ ಪದ್ಧತಿ ಇದೆ. ಅವುಗಳನ್ನು ಸಿಂಗರಿಸಲು ಅಲಂಕಾರಿಕ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಹೊಸದಾಗಿ ದವಸ, ಧಾನ್ಯಗಳಿಗೆ ಸುಗ್ಗಿಯ ಕಾಲದಲ್ಲಿ ಪೂಜೆ ಮಾಡುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಆಗಿನ ಕಾಲದ ಹಬ್ಬದ ವಾತಾವರಣವೇ ಬೇರೆ ಇತ್ತು. ಆಧುನಿಕ ಪದ್ಧತಿ ಬೆಳೆದಂತೆ ಹಬ್ಬದ ಸಂಭ್ರಮ ಬದಲಾಗುತ್ತಿದೆ ಎಂದು ಹಿರಿಯರು ಅಭಿಪ್ರಾಯ ಹಂಚಿಕೊಂಡರು.

ರೈತರಿಗೆ ಸಂಕ್ರಾಂತಿ ಸುಗ್ಗಿ ಹಬ್ಬವಾಗಿದೆ. ಈಗ ಹಬ್ಬದ ಕಲೆಯೇ ಕಾಣುತ್ತಿಲ್ಲ. ಆ ದಿನಗಳಲ್ಲಿ ಹಬ್ಬವೆಂದರೆ ಗ್ರಾಮಗಳಲ್ಲಿ ಹಸಿರು ತೋರಣ ಕಟ್ಟಿ ರಾಸುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದರು. ಈಗ ಹಬ್ಬಕ್ಕೆ ಆ ಕಳೆ ಇಲ್ಲದಾಗಿದೆ. -ನಾರಾಯಣಸ್ವಾಮಿ, ರೈತ

ಸಂಕ್ರಾಂತಿ ಹಬ್ಬ ಸುಗ್ಗಿ ಹಬ್ಬದ ರೀತಿ ಆಚರಿಸುತ್ತೇವೆ. ಮಾರುಕಟ್ಟೆಗೆ ಅಗತ್ಯ ವಸ್ತುಗಳು, ಹೂವು, ಹಣ್ಣುಗಳ ಬೆಲೆ ಹೆಚ್ಚಾಗಿದೆ. ಅವರೇಕಾಯಿ, ಕಬ್ಬು, ಗೆಣಸು, ಎಳ್ಳೂ-ಬೆಲ್ಲ ದರ ಹೆಚ್ಚಾಗಿದ್ದು, ಎಷ್ಟೇ ಬೆಲೆ ಏರಿಕೆಯಾದರೂ ಹಬ್ಬ ಮಾಡುವುದು ನಿಲ್ಲಿಸಲು ಆಗುವುದಿಲ್ಲ. – ಗಾಯತ್ರಿ, ಗೃಹಿಣಿ

Advertisement

Udayavani is now on Telegram. Click here to join our channel and stay updated with the latest news.

Next