ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಬುಧವಾರ ಗಾಮೀಣ ಸೊಗಡು ಮೈದೆಳೆದಿತ್ತು. ನಗರ ಮೈದಾನಗಳಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಧಾನ್ಯಗಳ ರಾಶಿ ಪೂಜೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ನಗರದ ಹಳೆಯ ಪ್ರದೇಶಗಳಲ್ಲಿ ಮನೆ ಮುಂಭಾಗ ರಂಗೋಲಿ ಹಾಕಿ ಸಿಂಗರಿಸಲಾಗುತ್ತು.
“ಸಂಕ್ರಾಂತಿ ಶುಭಾಶಯಗಳು’ ಎಂಬ ಅಡಿ ಬರಹ, ಕಬ್ಬು ಎಳ್ಳು-ಬೆಲ್ಲಗಳ ವಿನಿಮಯದ ಸಂಭ್ರಮ ಜೋರಾಗಿತ್ತು. ಹೊಸ, ಬಟ್ಟೆ ತೊಟ್ಟಿದ್ದ ಮಕ್ಕಳು ಸಂಜೆ ಆಗುತ್ತಿದ್ದಂತೆ ನೆರೆ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ಸಿಹಿ ಪೊಂಗಲ್ ತಯಾರಿಸಿ ಸವಿದರು. ಬಡಾವಣೆಯ ಮೈದಾನದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಂಕ್ರಾಂತಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದವು. ಹಬ್ಬದ ಹಿನ್ನೆಲೆ ದೇವಾಲಯಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು.
ಮುಂಜಾನೆಯಿಂದಲೇ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೆ.ಆರ್. ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಯಶವಂತಪುರ ಸರ್ಕಲ್‌ನ ಗಾಯತ್ರಿ ದೇವಸ್ಥಾನ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ನೆರೆದಿದ್ದು, ನಿರಂತರವಾಗಿ ವಿಶೇಷ ಪೂಜೆಗಳು ನೆರವೇರಿದವು.
ಕಿಚ್ಚಿನ ಸಂಕ್ರಾಂತಿ: ಮೈ ಕೊರೆವ ಚಳಿಯ ದಿನಗಳು ಮುಗಿಯಲಿವೆ ಎಂಬುದರ ಸಂಕೇತವೆಂಬಂತೆ ಸಂಕ್ರಾಂತಿ ಹಬ್ಬದಲ್ಲಿ ಬೆಂಕಿಯ ಕಿಚ್ಚಿನ ಮೇಲೆ ದನಗಳನ್ನು ಹಾಯಿಸುವ ವಿಶಿಷ್ಟ ಆಚರಣೆ ಮಾಡಲಾಯಿತು. ನಗರದ ಅನೇಕ ಕಡೆಗಳಲ್ಲಿ ಬೆಳಗ್ಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸಂಜೆ ವಿವಿಧ ಕಡೆಗಳಿಂದ ರಾಸುಗಳನ್ನು ಕರೆತಂದು ಕಿಚ್ಚು ಹಾಯಿಸುವ ಮೂಲಕ ಗ್ರಾಮೀಣ ಸೊಗಡನ್ನು ಸಂಭ್ರಮಿಸಲಾಯಿತು.
ರಾಸುಗಳನ್ನು ಮೈ ತೊಳೆದು, ಅವುಗಳ ಕೊಂಬು ಹೆರೆದು, ಬಣ್ಣದ ಬಲೂನು, ರಿಬ್ಬನ್ ಟೇಪ್‌ಗ್ಳಿಂದ ಅಲಂಕರಿಸಿ, ಬೆನ್ನ ಮೇಲೆ ಸಿಂಗಾರದ ಬಟ್ಟೆ ಹೊದಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಗಂಟೆ ಮಾಲೆ ಹಾಕಿ ಸಿಂಗಾರ ಮಾಡಲಾಗಿತ್ತು. ಪ್ರಮುಖವಾಗಿ ಜಯನಗರ,ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಆಟದ ಮೈದಾನ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭನರಗಳಲ್ಲಿ ವಿವಿಧ ಸಂಸ್ಥೆಗಳು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಹಾಯಿಸುವ ಸ್ಪರ್ಧೆ ನಡೆಸಿದವು.
ರಾಸುಗಳು ಆರೇಳು ಅಡಿ ಎತ್ತರಕ್ಕೆ ಉರಿಯುವ ಬೆಂಕಿಯಲ್ಲಿ ಹಾಯ್ದು ಮುಂದೆ ಓಡಿದರೆ, ತನ್ನ ರಾಸುಗಳು ಕಿಚ್ಚು ಹಾಯ್ದವು ಎಂದು ಮಾಲೀಕರು ಖುಷಿಪಟ್ಟರು. ಹೊಸಕೆರೆ ಹಳ್ಳಿಯ ಸುತ್ತಮುತ್ತ ಸಂಕ್ರಾಂತಿಯನ್ನು ಪ್ರತೀತಿಯಂತೆ ಕಾಟುಂರಾಯ ಹಬ್ಬ ಎಂದು ಮಾಡಲಾಯಿತು. ಅಲ್ಲಿನ ಬಸ್ ನಿಲ್ದಾಣದ ಬಳಿಯ ಮೈದಾನದಲ್ಲಿ ಕಾಟುಂರಾಯ ಮೂರ್ತಿ ಬಳಿ ಸ್ಥಳೀಯ ವಿವಿಧ ಸಂಘಗಳು ಸೇರಿ ರಾಸುವಿನ ಕಿಚ್ಚು ಹಾಯಿಸಲಾಯಿತು.
ಇಲ್ಲಿ ವಿಶೇಷವೆಂದರೆ ರಾಸುಗಳ ಜತೆಗೆ ಗೌಳಿ ಅಥವಾ ಮಾಲೀಕರು ಕಿಚ್ಚು ಹಾರಿದರು. ಸಹಕಾರ ನಗರ ಬಯಲು ರಂಗಮಂಟಪದಲ್ಲಿ ಸಂಗೀತ ಹಾಗೂ ನೃತ್ಯ ವೈಭವ, ನಗೆಹಬ್ಬ ಕಾರ್ಯಕ್ರಮ ನಡೆಯಿತು. ಬನಶಂಕರಿ 3ನೇ ಹಂತದ ಭುವನೇಶ್ವರಿ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ಗಾಯನ ಹಾಗೂ ಮೊಸರು ಗಡಿಗೆ ಹೊಡೆಯುವ ಸ್ಪರ್ಧೆಗಳು ನಡೆದವು.