ಮಳವಳ್ಳಿ: ಕೊರೊನಾ ಸೋಂಕಿನ ಆತಂಕ ಮರೆತು ವರ್ಷದ ಮೊದಲ ಹಬ್ಬ ರೈತರ ಸುಗ್ಗಿ ಹಬ್ಬ, ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿತ್ತು. ಆದರೆ ಆದೇಶಕ್ಕೆ ಕ್ಯಾರೇ ಎನ್ನದ ಜನರು ಅದ್ದೂರಿಯಾಗಿ ಆಚರಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪರಸ್ಪರ ಎಳ್ಳು-ಬೆಲ್ಲ ಹಂಚಿ ಶುಭಾಶಯ ಕೋರಿದರು. ಕಳೆದ ವರ್ಷದ ಸಡಗರ ಕೋವಿಡ್‌ನಿಂದಾಗಿ ಮರೆಯಾಗಿತ್ತು. ತಾಲೂಕಿನಾದ್ಯಂತ ರೈತರು ತಾವು ಬೆಳೆದ ಆಹಾರ ಧಾನ್ಯಗಳ ರಾಶಿಗಳಿಗೆ ಸರಳವಾಗಿ ಪೂಜೆ ಸಲ್ಲಿಸಿ ರಾಸುಗಳಿಗೆ ಹೂವುಗಳಿಂದ ಅಲಂಕಾರ ಮಾಡಿ ರಾಸುಗಳನ್ನು ಕಿಚ್ಚು ಹಾಯಿಸುವುದರ ಮೂಲಕ ಹಬ್ಬ ಆಚರಣೆ ಮಾಡಿದರು.
ಪಟ್ಟಣದ ಪೇಟೆಬೀದಿ, ಸುಲ್ತಾನ್ ರಸ್ತೆ, ಮೈಸೂರು, ಕನಕಪುರ, ಕೊಳ್ಳೇಗಾಲ ರಸ್ತೆ ಸೇರಿದಂತೆ ವಿವಿಧೆಡೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈತರು ರಾಸುಗಳನ್ನು ಕಿಚ್ಚು ಹಾಯಿಸಿದರು. ಹಬ್ಬದ ಅಂಗವಾಗಿ ಪಟ್ಟಣದ ಕೋಟೆ ಬೀದಿಯ ಇತಿಹಾಸ ಪ್ರಸಿದ್ಧ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಸಾರಂಗಪಾಣಿ, ಹೊರವಲಯದ ಲಕ್ಷ್ಮೀ ನರಸಿಂಹಸ್ವಾಮಿ, ದಂಡಿನ ಮಾರಮ್ಮ, ಕಂದೇಗಾಲ- ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಹಲವೆಡೆ ಬೆಳಗಿನ ಜಾವವೇ ಅರ್ಚಕರು ಪೂಜಾ ಕೈಂಕರ್ಯ ನಡೆಸಿದರು.
ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆ ದೇವಸ್ಥಾನ ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿ ಸಲಾಗಿತ್ತು. ಆದರೂ ಮಾಸ್ಕ್ ಮತ್ತು ಅಂತರ ಕಾಯ್ದುಕೊಂಡು ಜನರು ದೇವರ ದರ್ಶನ ಪಡೆದರು.