Advertisement

ಸಂಕೀಘಟ್ಟ ಮಾದರಿ ಪಬ್ಲಿಕ್ ಶಾಲೆ ಲೋಕಾರ್ಪಣೆ ಮಾಡಿದ ಅಶ್ವತ್ಥನಾರಾಯಣ

06:30 PM Mar 16, 2022 | Team Udayavani |

ಕುದೂರು:  ಸರಕಾರದ `ಪ್ರತೀ ಗ್ರಾಮ ಪಂಚಾಯಿತಿಗೊಂದು ಮಾದರಿ ಪಬ್ಲಿಕ್ ಶಾಲೆ’ಯೋಜನೆಯಡಿ ಅಭಿವೃದ್ಧಿಪಡಿಸಿರುವ ಸಂಕೀಘಟ್ಟ ಶಾಲೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಲೋಕಾರ್ಪಣೆ ಮಾಡಿದರು.

Advertisement

ಮಾತನಾಡಿದ ಅವರು, `21ನೇ ಶತಮಾನವು ಜ್ಞಾನದ ಯುಗವಾಗಿದ್ದು, ಗುಣಮಟ್ಟದ ಶಿಕ್ಷಣವು ಅನಿವಾರ್ಯ ಅಗತ್ಯವಾಗಿದೆ. ಹೀಗಾಗಿ, ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಒಟ್ಟುಗೂಡಿಸಿ, ಅತ್ಯುತ್ತಮ ರೀತಿಯಲ್ಲಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದು ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುವುದು’ ಎಂದರು.

ಮಾದರಿ ಪಬ್ಲಿಕ್ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಸಂಕೀಘಟ್ಟದ ಶಾಲೆಗೆ ಆಟದ ಮೈದಾನ, ಸ್ಮಾರ್ಟ್ ತರಗತಿಗಳು, ಶೌಚಾಲಯ, ಬೋಧಕ ಸಿಬ್ಬಂದಿ ಎಲ್ಲವನ್ನೂ ಒದಗಿಸಲಾಗುವುದು. ಜತೆಗೆ, ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಮತ್ತು ಪುನಃ ಮನೆಗೆ ತಲುಪಿಸಲು ವಾಹನ ವ್ಯವಸ್ಥೆಯನ್ನೂ ಮಾಡಲಾಗುವುದು. 2022-23ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಯು ಕಾರ್ಯಾರಂಭ ಮಾಡಲಿದೆ’ ಎಂದು ಅವರು ಹೇಳಿದರು.

ಈ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯವಾಗಿರುವ ಮತ್ತಷ್ಟು ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. ಜತೆಗೆ, ಕೆಲವರು ಈ ಶಾಲೆಗೋಸ್ಕರ ಭೂಮಿಯನ್ನು ದಾನವಾಗಿ ಮಾಡಲು ಮುಂದೆ ಬಂದಿದ್ದಾರೆ. ಅದನ್ನೂ ಬಳಸಿಕೊಂಡು, ಈ ಶಾಲೆಯನ್ನು ಪರಿಪೂರ್ಣವಾಗಿ ಬೆಳೆಸಲಾಗುವುದು ಎಂದು ಅವರು ತಿಳಿಸಿದರು.

ಸಂಕೀಘಟ್ಟದ ಶಾಲೆಯಲ್ಲಿ ಅಗತ್ಯವಾದ ಹೆಚ್ಚುವರಿ ಕೊಠಡಿಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದರೊಂದಿಗೆ ಕಂಪ್ಯೂಟರ್ ತರಗತಿಗಳು ಮತ್ತು ವಿಜ್ಞಾನ ಪ್ರಯೋಗಾಲಯಗಳ ಸೌಲಭ್ಯಗಳನ್ನೂ ಕೊಡಲಾಗುವುದು. ಇಲ್ಲಿ 1ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡೂ ಇರಲಿವೆ. ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕುಗಳಲ್ಲೂ ಇಂತಹ ತಲಾ ಒಂದೊಂದು ಶಾಲೆಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Advertisement

ಹೆಚ್ಚಿನ ಸರಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರೆಗೆ ಕೇವಲ 30 ಮಕ್ಕಳಿಗಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಅವು ಮುಚ್ಚುವ ಸ್ಥಿತಿಗೆ ಬಂದಿವೆ. ಜತೆಗೆ ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಇರುವ ಒಬ್ಬಿಬ್ಬರು ಶಿಕ್ಷಕರೇ ಎಲ್ಲ ವಿಷಯಗಳನ್ನೂ ಬೋಧಿಸುತ್ತಿದ್ದಾರೆ. ಹೀಗಾಗಿ, ಕಡಿಮೆ ಮಕ್ಕಳಿರುವ ಸ್ಥಳೀಯ ಶಾಲೆಗಳನ್ನು ಒಟ್ಟುಗೂಡಿಸಿ, ಪ್ರತೀ ಗ್ರಾಪಂ ವ್ಯಾಪ್ತಿಯಲ್ಲೂ ಒಂದು ಪಬ್ಲಿಕ್ ಮಾದರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಗ್ರಾಮೀಣ ವಿದ್ಯಾರ್ಥಿಗಳು ಕೂಡ ಇಂದು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರಿಗೂ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಪೂರೈಸುವುದು ಸರಕಾರದ ಕರ್ತವ್ಯವಾಗಿದೆ. ಇದಕ್ಕಾಗಿ ಈಗಾಗಲೇ ಹಲವು ಉಪಕ್ರಮಗಳನ್ನು ರೂಪಿಸಿ, ಜಾರಿಗೊಳಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ವಾಹನಕ್ಕೆ ದೇಣಿಗೆ:

ಸಂಕೀಘಟ್ಟ ಮತ್ತು ತಿಪ್ಪಸಂದ್ರದ ಶಾಲೆಗಳ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ ಮಾಡಲಿ ಎನ್ನುವ ಕಾರಣಕ್ಕೆ ಸಚಿವ ಅಶ್ವತ್ಥನಾರಾಯಣ ಅವರು ತಮ್ಮ ಫೌಂಡೇಶನ್ ವತಿಯಿಂದ ತಲಾ ಒಂದು ಲಕ್ಷ ದೇಣಿಗೆಯ ಚೆಕ್ ನೀಡಿದರು. ಇದೇ ಸಂದರ್ಭದಲ್ಲಿ ಈ ಎರಡೂ ಪಂಚಾಯಿತಿಗಳ ಸದಸ್ಯರು ಕೂಡ ತಲಾ ಮೂರು ಲಕ್ಷ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ‌ ಮಂಜುನಾಥ ಅವರು ಕೂಡ ತಲಾ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಡಿಡಿಪಿಐ ಗಂಗಣ್ಣ, ಬ್ಲಾಕ್ ಶಿಕ್ಷಣಾಧಿಕಾರಿ ಯತೀಶ್, ತಹಸೀಲ್ದಾರ್ ಶ್ರೀನಿವಾಸ್, ಸಂಕೀಗಟ್ಟ ಗ್ರಾಪಂ ಅಧ್ಯಕ್ಷ ಸೂರ್ಯಕುಮಾರ್, ತಿಪ್ಪಸಂದ್ರ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next