ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಮೂರು ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಒತ್ತಾಯಿಸಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಿಂದ ಏ.13ರಿಂದ 17ವರೆಗೆ ಟ್ರ್ಯಾಕ್ಟರ್‌ಗಳೊಂದಿಗೆ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ವೇದಿಕೆ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ತುಂಗಭದ್ರ ಜಲಾಶಯಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ವೇದಿಕೆ ಹೋರಾಟಕ್ಕೆ ಮಹದಾಯಿ ಹೋರಾಟ ಸಮಿತಿ, ರೈತ ಸಂಘ, ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ, ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆ, ಕೃಷ್ಣಾ ಮೇಲ್ದಡೆ ಯೋಜನೆ ಹಿತರಕ್ಷಣಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಗುತ್ತಿ ಬಸವಣ್ಣ ಹೋರಾಟ ಸಮಿತಿ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಘ ಇನ್ನಿತರೆ ಸಂಘಟನೆಗಳು ಬೆಂಬಲ ನೀಡಿವೆ ಎಂದರು.
ರಾಜ್ಯದ ಒಟ್ಟು ಜಲಸಂಪತ್ತಿನಲ್ಲಿ ಉತ್ತರ ಕರ್ನಾಟಕದ ಪಾಲು ಶೇ.68 ಇದ್ದರೂ, ಒಟ್ಟು ನೀರಾವರಿಯಲ್ಲಿ ಕಲ್ಯಾಣ ಕರ್ನಾಟಕದ ಪಾಲು ಶೇ.1.37ರಷ್ಟಿದ್ದರೆ, ಕಿತ್ತೂರು ಕರ್ನಾಟಕದ ಪಾಲು ಶೇ.3.33ರಷ್ಟಾಗಿದೆ. ಹಳೇ ಮೈಸೂರು ಭಾಗದ ಪಾಲು ಶೇ.7.5ರಷ್ಟಿದೆ. ಡಾ|ಡಿ.ಎಂ.ನಂಜುಂಡಪ್ಪ ಅವರ ವರದಿ ಪ್ರಕಾರ 114 ಹಿಂದುಳಿದ ತಾಲೂಕುಗಳಲ್ಲಿ 59 ತಾಲೂಕುಗಳು ಇದೇ ಭಾಗದ್ದಾಗಿವೆ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ಉತ್ತರ ಕರ್ನಾಟಕ ಹಿಂದುಳಿದ ಹಣೆಪಟ್ಟಿ ಹೊತ್ತಿದೆ. ಮಹದಾಯಿ ನದಿ ನೀರು ಹಂಚಿಕೆಯಾಗಿ, ಅಧಿಸೂಚನೆ ಹೊರ ಬಿದ್ದಿದ್ದರೂ ಕಾಮಗಾರಿ ಆರಂಭವಾಗಿಲ್ಲ. ರೈತರು ನಿರಂತರ ಹೋರಾಟ ಮಾಡಿದರೂ ಸರಕಾರಗಳ ಸ್ಪಂದನೆ ಸಮರ್ಪಕವಾಗಿ ಇಲ್ಲವಾಗಿದೆ. ಅದೇ ರೀತಿ ಯುಕೆಪಿ 3ನೇ ಹಂತದ್ದು. ನ್ಯಾ|ಬ್ರಿಜೇಶಕುಮಾರ ನೇತೃತ್ವತ್ವದ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ, ಆಲಮಟ್ಟಿ ಜಲಾಶಯ ಮಟ್ಟ ಹೆಚ್ಚಳ ಮಾಡಲು ಅನುಮತಿ ನೀಡಿದ್ದರೂ ಇದುವರೆಗೂ ಕೇಂದ್ರದಿಂದ ಅಧಿಸೂಚನೆ ಹೊರ ಬಿದ್ದಿಲ್ಲ. ತುಂಗಭದ್ರ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಯೋಜಿಸಿದ್ದರೂ, ಡಿಪಿಆರ್ ಮಾಡಲಾಗಿಲ್ಲ. ಈ ಎಲ್ಲ ಅಂಶಗಳೊಂದಿಗೆ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಹೋರಾಟಕ್ಕೆ ಮುಂದಾಗಿದೆ ಎಂದರು.
ನರಗುಂದದಿಂದ ಆರಂಭವಾಗುವ ಸಂಕಲ್ಪ ಯಾತ್ರೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಪಾಲ್ಗೊಳ್ಳಲಿವೆ. ಏ.13ರಂದು ಬೆಳಿಗ್ಗೆ 9:30ಗಂಟೆಗೆ ನರಗುಂದದಲ್ಲಿ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದು, ಸುಮಾರು 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಏ.17ರಂದು ಬಾಗಲಕೋಟೆ ಜಿಲ್ಲೆ ಬೀಳಗಿಯ ಬಾಡಗಂಡಿಯ ಬಾಪೂಜಿ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿ ಸಮಾವೇಶದೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.
ಸಂಕಲ್ಪ ಯಾತ್ರೆ ಇದ್ದಕ್ಕಿದ್ದಂತೆ ಆರಂಭವಾಗಿದ್ದಲ್ಲ. 2021ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೇ ಇದನ್ನು ಘೋಷಿಸಿದ್ದೆ. ಜತೆಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಂಧಿ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಕೈಗೊಂಡಿದ್ದೆ ಎಂದರು.
ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಕೈಗೊಂಡಿದ್ದೆವು. ನಮ್ಮ ಸರಕಾರ ಬಂದ ನಂತರದಲ್ಲಿ ನೀರಾವರಿಗಾಗಿ 55 ಸಾವಿರ ಕೋಟಿ ರೂ.ನೀಡಿದ್ದೇವೆ. ನಾನು ಕಾಂಗ್ರೆಸ್‌ಗೆ ಸಡ್ಡು ಹೊಡೆದಿದ್ದೇನೆ ಎಂಬುದು ಸರಿಯಲ್ಲ. ಸದನಲ್ಲಿಯೇ ಹೋರಾಟದ ಘೋಷಣೆ ಮಾಡಿದ್ದೇ ಅದರಂತೆ ಇದೀಗ ಕೈಗೊಳ್ಳುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಜತೆ ಮಾತನಾಡುವುದಕ್ಕೆ ಸಮಯ ಕೇಳಿದ್ದೇನೆ. ಸಮಯ ಸಿಗುವ ವಿಶ್ವಾಸವಿದೆ ಎಂದರು.
ಮೂರು ನೀರಾವರಿ ಯೋಜನೆಗಳ ಅನುಷ್ಠಾನ ಜತೆಗೆ ಉತ್ತರದ ಅಭಿವೃದ್ಧಿಗೆ ಒತ್ತು ನೀಡಬೇಕು, ರಾಜ್ಯದ ಒಟ್ಟು ಬಜೆಟ್‌ನ ಶೇ.15 ಹಣ ನೀರಾವರಿಗೆ ಮೀಸಲಿಡಬೇಕೆಂಬ ಬೇಡಿಕೆ ನಮ್ಮದಾಗಿದೆ. ಟ್ರ್ಯಾಕ್ಟರ್ ರ್ಯಾಲಿ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಸರದಿ ಉಪವಾಸ ಅದಾದ ನಂತರ ಅಮರಣ ಉಪವಾಸ ಕೈಗೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಬಿ.ಆರ್.ಯಾವಗಲ್ಲ, ಪ್ರಶಾಂತ ಅಂತರಗೊಂಡ, ರಾಜುಗೌಡ ಪಾಟೀಲ, ಹನುಮಂತಪ್ಪ ಮೇಟಿ, ಎಂ.ಎನ್.ಪಾಟೀಲ ಇನ್ನಿತರರಿದ್ದರು.