Advertisement

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

11:09 AM Sep 28, 2024 | Team Udayavani |

ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗುತ್ತದೆ ಮತ್ತು ಅದು ಯಾವ ಸಮಯದಲ್ಲಿ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡಾ ಪ್ರಮುಖವಾಗಿರುತ್ತದೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳ ಬಾರದು, ಕೋಪದ ಕೈಗೆ ಬುದ್ಧಿಕೊಡಬಾರದು… ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ಸಂಜು’.

Advertisement

ಇದೊಂದು ಲವ್‌ ಸ್ಟೋರಿ ಜೊತೆಗೆ ಫ್ಯಾಮಿಲಿ ಡ್ರಾಮಾ. ಇಲ್ಲಿ ಪ್ರೀತಿ ಇದೆ ಜೊತೆಗೆ ಮುರಿದ ಹೃದಯವೂ ಇದೆ, ಕನಸು ಈಡೇರಿಸಿಕೊಳ್ಳಬೇಕೆಂಬ ಮನಸು ಕೂಡಾ ಇದೆ. ಆದರೆ, ಈ ಕನಸು ಮನಸುಗಳಿಗೆ ಅಡ್ಡಗಾಲು ಹಾಕುವ ಕಟ್ಟುಪಾಡು ಹಾಗೂ ಹೆಣ್ಣು ಹೆತ್ತವರ ಭಯವೂ ಇದೆ. ಇಡೀ ಸಿನಿಮಾವನ್ನು ಈ ಅಂಶಗಳೇ ಮುನ್ನಡೆಸಿಕೊಂಡು ಹೋಗುತ್ತವೆ.

ನಿರ್ದೇಶಕ ಯತಿರಾಜ್‌ ಒಂದು ಸೂಕ್ಷ್ಮಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ಬಹುತೇಕ ಸಿನಿಮಾಗಳ ಕಥೆ-ವ್ಯಥೆ ತೆರೆದು ಕೊಳ್ಳುವುದು ದ್ವಿತೀಯಾ ರ್ಧದಲ್ಲಿ. ಸಂಜು ಕೂಡಾ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಮೊದಲರ್ಧದಲ್ಲಿ ನಾಯಕ-ನಾಯಕಿಯ ಪರಿಚಯ, ಕಾಮಿಡಿ ಸೇರಿದಂತೆ ಇತರ ಅಂಶಗಳ ಮೂಲಕ ಸಾಗಿದರೆ, ಚಿತ್ರದ ಗಂಭೀರ ವಿಚಾರ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ನಾಯಕನ ಕಥೆಯ ಜೊತೆಗೊಂದು ವ್ಯಥೆಯೂ ಇದೆ. ಅದಕ್ಕೆ ತಾಯಿ ಬೆನ್ನೆಲುಬಾಗಿ ನಿಂತು ಮಗನನ್ನು ಚಿಂತೆಯಿಂದ ಹೊರತರುವ ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ ಹಾಗೂ ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಇದೂ ಒಂದು.

ಒಂದಷ್ಟು ಕಾಮಿಡಿ ಹಾಗೂ “ಅಂಗಡಿ’ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾದ ವೇಗ ಹೆಚ್ಚುತ್ತಿತ್ತು. ಇಡೀ ಸಿನಿಮಾ ಬಹುತೇಕ ಒಂದೇ ಪರಿಸರದಲ್ಲಿ ಸುತ್ತಿದರೂ ಅದನ್ನು ಬೋರ್‌ ಆಗದಂತೆ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಒಂದು ಪ್ರಯತ್ನವಾಗಿ “ಸಂಜು’ ಮೆಚ್ಚಬಹುದು.

ನಾಯಕ ಮನ್ವಿತ್‌ “ಹೃದಯ ವೈಶಾಲ್ಯತೆ’ಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ಇನ್ನೊಂದಿಷ್ಟು ಪಳಗಬೇಕಿದೆ. ನಾಯಕಿ ಸಾತ್ವಿಕಾ ಕಡಿಮೆ ಮಾತಿನ ಮುಗ್ಧ ಹುಡುಗಿ. ಉಳಿದಂತೆ ಬಲರಾಜವಾಡಿ, ಸುಂದರಶ್ರೀ ಸೇರಿದಂತೆ ಇತರರು ನಟಿಸಿದ್ದಾರೆ.

Advertisement

ಆರ್‌.ಪಿ.ರೈ

Advertisement

Udayavani is now on Telegram. Click here to join our channel and stay updated with the latest news.

Next