Advertisement

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

07:41 PM Nov 27, 2021 | Team Udayavani |

ಬೆಳ್ತಂಗಡಿ: ಈಗಿನ ಶಿಕ್ಷಣ ವ್ಯವಸ್ಥೆ ಕೇವಲ ವಿದ್ಯೆಯನ್ನು ಮಾತ್ರ ನೀಡುತ್ತಿದೆ. ಕೌಶಲವುಳ್ಳ ಯುವ ಜನಾಂಗ ವನ್ನು ತಯಾರು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಅಪವಾದವಾಗುವ ರೀತಿಯ ಉದಾಹರಣೆ ಇಲ್ಲಿದೆ.

Advertisement

ಕೌಶಲವುಳ್ಳ ಶಿಕ್ಷಣ ದೊರೆತಾಗ ಅಂಗವಿಕಲರೂ ವಿಶೇಷ ಚೇತನರಾಗುವರು ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಡೋಸಲ್ಫಾನ್‌ ಮಕ್ಕಳ ಆರೈಕೆ ಕೇಂದ್ರ ಸಾನಿಧ್ಯ ಕೌಶಲ ತರಬೇತಿ ಕೇಂದ್ರ ಸಾಕ್ಷಿ.

ದ.ಕ. ಹಾಗೂ ಕಾಸರಗೋಡು ಸೇರಿದಂತೆ ಎಂಡೋಸಲ್ಫಾನ್‌ ಎಂಬ ಪೆಟಂಭೂತಕ್ಕೆ ಸಿಲುಕಿ ಅದೆಷ್ಟೋ ಸಾವಿರಾರು ಮಕ್ಕಳು ಹುಟ್ಟು ನ್ಯೂನತೆಗೊಳಗಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಸಂಪೂರ್ಣ ಬುದ್ಧಿಮಾಂದ್ಯತೆ ಅವರನ್ನು ಬಲಿ ಪಡೆದಿಲ್ಲ, ವಿಶೇಷ ಕೌಶಲಗಳು ಅವರಲ್ಲಿದೆ. ಇದನ್ನು ಸಾನಿಧ್ಯ ಕೇಂದ್ರದಲ್ಲಿ ಗುರುತಿಸಲಾಗುತ್ತದೆ.

ಉಜಿರೆ ಸಾನಿಧ್ಯ ಕೌಶಲ ತರಬೇತಿ ಕೇಂದ್ರ 2019 ಜನವರಿ 7ರಂದು 4, 5 ಮಕ್ಕಳಿಂದ ಆರಂಭಗೊಂಡು ಇಂದಿಗೆ 52 ಮಕ್ಕಳ ದಾಖಲಾತಿವರೆಗೆ ಮುನ್ನಡೆಯುತ್ತಿದೆ. ವಿಶೇಷ ತರಬೇತಿ ಪಡೆದ ಮೂವರು ವಿಶೇಷ ಶಿಕ್ಷಕಿಯರು ಮಕ್ಕಳ ಕಲೆಯನ್ನು ಅರಳಿಸಲು ಶ್ರಮಿಸುತ್ತಿದ್ದಾರೆ. ಉಜಿರೆ ಯಿಂದ 15 ಕಿ.ಮಿ. ವ್ಯಾಪ್ತಿಯ 6 ವರ್ಷದಿಂದ 36 ವರ್ಷ ವಯೋಮಾನದ ಮಕ್ಕಳು ಈ ಕೇಂದ್ರದಲ್ಲಿದ್ದು, 6ರಿಂದ 8 ವರ್ಷ, 9ರಿಂದ 13, 14ರಿಂದ 16, 18 ವರ್ಷ ವಯಸ್ಸಿನವರಿಗೆವರೆಗೆ ಒಂದು ತರಗತಿ, 18ರ ವಯೋಮಾನದ ಮೇಲಿನ ಮಕ್ಕಳ ಕರಕುಶಲ ತಯಾರಿಗೆಂದು ವಿಶೇಷ ತರಗತಿ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೇಕರಿಯ ಆಹಾರದ ಶುಚಿತ್ವವನ್ನು ಪರಿಶೀಲಿಸಿದ ಅಧಿಕಾರಿ

Advertisement

ಕ್ರಾಫ್ಟ್‌ ತಯಾರಿ ವಿಶೇಷತೆ
ಹೆಲೆನ್‌ ಮತ್ತು ಹೇಮಾವತಿ ಮಕ್ಕಳಿಗೆ ಕರ ಕುಶಲತೆ ಬೋಧನೆ ನೀಡುತ್ತಿದ್ದಾರೆ. ಇವರ ಕೈಯಿಂದ ಪ್ರತಿನಿತ್ಯ ಅರಳುವ ಕಲಾಕೃತಿ ನಿಜಕ್ಕೂ ಅದ್ಭುತ. ಪರಿಣತ ಮಕ್ಕಳು ಬಾಸ್ಕೆಟ್‌ ತಯಾರಿ, ಬಟ್ಟೆ ಹಾಗೂ ಫೈಬರ್‌ನಿಂದ ಟಿಫಿನ್‌ ಬ್ಯಾಗ್‌, ಪೇಪರ್‌, ನೆಟ್‌ ಫÉವರ್‌, ಹಳೆ ಬಟ್ಟೆಯಿಂದ ಮ್ಯಾಟ್‌, ಉಲನ್‌ ಟೋಪಿ, ಮುತ್ತಿನ ಸರ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ತಯಾರಿಸುತ್ತಾರೆ.

ಮಾರಾಟಕ್ಕೂ ವ್ಯವಸ್ಥೆ
ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಕೈಯಿಂದ ಅರಳಿದ ಕರಕುಶಲಕ್ಕೆ ಕೌಶಲ ಕೇಂದ್ರದಿಂದಲೇ ಮಾರುಕಟ್ಟೆ ಸಿದ್ಧಪಡಿಸಲಾಗುತ್ತದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಜಾತ್ರೆ ಸಂದರ್ಭ ದೇವಸ್ಥಾನದಿಂದ ಉಚಿತ ಸ್ಟಾಲ್‌ ಒದಗಿಸಲಾಗುತ್ತಿದೆ. ಜತೆಗೆ ಸಾನಿಧ್ಯ ಕೇಂದ್ರಕ್ಕೆ ಭೇಟಿ ನೀಡುವವರು ವಸ್ತುಗಳನ್ನು ಖರೀದಿಸುತ್ತಾರೆ. ಇದರಿಂದ ಬಂದ ಲಾಭದಿಂದ ಮಕ್ಕಳಿಗೆ ಮಂಗಳೂರಿನಿಂದ ಕ್ರಾಫ್ಟ್‌ ತಯಾರಿಗೆ ಬೇಕಾದ ಸಿದ್ಧವಸ್ತುಗಳನ್ನು ಖರೀದಿಸಲಾಗುತ್ತದೆ.

ಪ್ರದರ್ಶನ
ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಪಾಲನೆ ಸವಾಲಿನ ಕೆಲಸ. ಸರಕಾರದ ಅನುದಾನ, ದಾನಿಗಳ ನೆರವಿನಿಂದಲೂ ಕೇಂದ್ರ ಮುನ್ನಡೆಯುತ್ತಿದೆ. ಪ್ರತೀ ವರ್ಷ ಮಾರ್ಚ್‌ನಲ್ಲಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯುವ ಸಾನಿಧ್ಯ ಉತ್ಸವದಲ್ಲಿ ಮಕ್ಕಳ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಗುತ್ತಿದೆ.
-ಡಾ| ವಸಂತ್‌ ಕುಮಾರ್‌ ಶೆಟ್ಟಿ, ಆಡಳಿತಾ ಕಾರಿ, ಸಾನಿಧ್ಯ ಸಮೂಹ ಸಂಸ್ಥೆ ಮಂಗಳೂರು.

ವಿಶೇಷ ತರಬೇತಿ
ವಿಶೇಷ ಮಕ್ಕಳ ಶಿಕ್ಷಣಕ್ಕೆ ಬೇಕಾಗಿರುವುದು ತಾಳ್ಮೆ ಮತ್ತು ಸಮರ್ಪಣಾಭಾವ. ದೈನಂದಿನ ಕಾರ್ಯಚಟುವಟಿಕೆ, ಸೂಕ್ಷ್ಮ ಚಲನೆ, ದೊಡ್ಡ ಮಟ್ಟದ ಚಲನವಲನ, ಬಟ್ಟೆ ಧರಿಸುವುದರಿಂದ ಹಿಡಿದು ಪ್ರತಿ ದೈನಂದಿನ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ಹಂತ ಹಂತದ ತರಬೇತಿ ನೀಡಿ ಉತ್ತೇಜಿಸಿದಲ್ಲಿ ಮಕ್ಕಳ ಜ್ಞಾಪಕಶಕ್ತಿ ವೃದ್ಧಿಸಲಿದೆ.
-ಜೋಸ್ಫಿನಾ ಪಿ.ಟಿ.,
ಮೇಲ್ವಿಚಾರಕಿ,ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next