ಹೊಸದಿಲ್ಲಿ: ಭಾರತದ ಸಾನಿಯಾ ಮಿರ್ಜಾ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದಿಂದ ಹಿಂದೆ ಸರಿದಿದ್ದಾರೆ.
ಕೆನಡದಲ್ಲಿ ಎರಡು ವಾರ ಹಿಂದೆ ನಡೆದ ಕೆನಡಿಯನ್ ಓಪನ್ ಟೆನಿಸ್ ಕೂಟದ ವೇಳೆ ಅವರು ಗಾಯಗೊಂಡಿದ್ದರು. ಸ್ಕ್ಯಾನ್ ಮಾಡಿದಾಗ ಸ್ಯಾಯುರಜ್ಜುವಿಗೆ ಗಾಯವಾಗಿರುವುದು ತಿಳಿಯಿತು. ಇದರಿಂದಾಗಿ ಯುಎಸ್ ಓಪನ್‌ನಿಂದ ಹಿಂದೆ ಸರಿಯಲು ಅವರು ನಿರ್ಧರಿಸಿದರು.
ಯುಎಸ್ ಓಪನ್ ಟೆನಿಸ್ ಕೂಟವು ಆ. 29ರಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿದೆ.ಕೆನಡದಲ್ಲಿ ಆಡುವಾಗ ನನ್ನ ಮೊಣಕೈಗೆ ಗಾಯವಾಯಿತು. ಗಾಯದ ತೀವ್ರತೆ ಮತ್ತು ಸ್ಕ್ಯಾನ್ ವರದಿಯ ಆಧಾರದಂತೆ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದೇನೆ . ಇದರಿಂದಾಗಿ ನನ್ನ ನಿವೃತ್ತಿಯ ಯೋಜನೆಯಲ್ಲಿಯೂ ಬದಲಾವಣೆಯಾಗಲಿದೆ. ಯಾಕೆಂದರೆ ಈ ಸಮಯದಲ್ಲಿ ನಾನು ನಿವೃತ್ತಿಯಾಗುವುದು ಒಳ್ಳೆಯ ಸೂಚನೆಯಲ್ಲ ಎಂದವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಕೆನಡಿಯನ್ ಓಪನ್‌ನಲ್ಲಿ ಮ್ಯಾಡಿಸನ್ ಕೀಸ್ ಜತೆ ಆಡಿ ವನಿತೆಯರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಸಾನಿಯಾ ಕಳೆದ ವಾರ ನಡೆದ ಸಿನ್ಸಿನಾಟಿ ಓಪನ್‌ನಲ್ಲೂ ಆಡಿದ್ದರು.
ಸಾನಿಯಾ ಇಷ್ಟರವರೆಗೆ ಆಸ್ಟ್ರೇಲಿಯನ್, ವಿಂಬಲ್ಡನ್ ಮತ್ತು ಯುಎಸ್ ಓಪನ್‌ನ ವನಿತಾ ಡಬಲ್ಸನಲ್ಲಿ ಒಮ್ಮೆ ಪ್ರಶಸ್ತಿ ಜಯಿಸಿದ್ದರು. ಆಸ್ಟ್ರೇಲಿಯನ್, ಫ್ರೆಂಚ್ ಮತ್ತು ಯುಎಸ್ ಓಪನ್‌ನ ಮಿಕ್ಸೆಡ್ ಡಬಲ್ಸ್‌ನಲ್ಲೂ ಪ್ರಶಸ್ತಿ ಜಯಿಸಿದ್ದರು.