ಸಿದ್ದಾಪುರ: ಸಂಘ ಸಂಸ್ಥೆಗಳು ಜನಪ್ರತಿನಿಧಿಗಳ ಹಾಗೂ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ಸಮಾಜ ಸೇವೆ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಸಮಾಜ ಸೇವೆ ಅಥವಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಪ್ರಶ್ನೆ ಹಾಗೂ ಚರ್ಚೆಗಳು ಮಾಡುವುದಿಲ್ಲವೂ ಅಲ್ಲಿಯ ತನಕ ರಾಜಕಾರಣಿಗಳು ಕೆಲಸ ಮಾಡುವುದಿಲ್ಲ. ಚುನಾವಣೆ ಹಾಗೂ ಮತಗಳ ನೀರೀಕ್ಷೆ ಇಲ್ಲದೆ ಸಮಾಜ ಸೇವೆ ಮಾಡುವ ಸಂಘ ಸಂಸ್ಥೆಗಳೆ ನಿಜವಾದ ಸಮಾಜ ಸೇವಕರು. ಜನಪ್ರತಿನಿಧಿಗಳು ಹಾಗೂ ರಾಜಕಾರಿಣಿಗಳು ಅಲ್ಲ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಹೇಳಿದರು.
ಅವರು ಸುಬ್ರಹ್ಮಣ್ಯ ಜೋಷಿ ಸುವರ್ಣ ಸಭಾ ಭವನ ಜೂನಿಯರ್ ಕಾಲೇಜು ಶಂಕರನಾರಾಯಣ ಇಲ್ಲಿ ನಡೆದ ಶಂಕರನಾರಾಯಣ ರೋಟರಿ ಕ್ಲಬ್‌ನ ಪದ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳನ್ನು ಕೇವಲ ಸಭೆ ಸಮಾರಂಭಗಳಿಗೆ ಅಲ್ಲದೆ ಕೆಲಸ ಕಾರ್ಯಗಳಿಗೂ ಕರೆಯ ಬೇಕು. ಇದರಿಂದ ಅವರ ಕರ್ತವ್ಯ ಪ್ರಜ್ಞೆ ಜಾಗೃತವಾಗುತ್ತದೆ. ಸಮಾಜದಲ್ಲಿ ಭ್ರಷ್ಟಾಚಾರ ತುಂಬಿಕೊಂಡಿದೆ. ಹಿಂದೆ ಭ್ರಷ್ಟಾಚಾರಿಗಳು ಯಾರು ಎಂದು ಗುರುತಿಸ ಬಹುದಾಗಿದೆ. ಆದರೆ ಈಗ ಒಳ್ಳೆಯವರು ಯಾರು ಇದ್ದಾರೆ ಎಂದು ಗುರುತಿಸುವಂತಾಗಿದೆ. ಶಂಕರನಾರಾಯಣ ರೋಟರಿಯು ಪದ ಪ್ರದಾನ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಮ್ಮಾನಿಸಿರುವುದು ಉತ್ತಮವಾದ ಕಾರ್ಯವಾಗಿದೆ ಎಂದು ಹೇಳಿದರು.
ರೋಟರಿ ವಲಯ – 2ರ ಉಪ ರಾಜ್ಯಪಾಲ ಎ.ಜಿ. ರತ್ನಾಕರ ಗುಂಡ್ಮಿ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ, ಶುಭ ಹಾರೈಸಿದರು.
ವಲಯ ಸೇನಾನಿ ಎ. ಎನ್. ಆನಂದ ಶೆಟ್ಟಿ ರೋಟರಿಯ ಕ್ರೋಢಶ್ರೀ ಪತ್ರಿಕೆ ಅನಾವರಣಗೊಳಿಸಿದರು.ಅಧ್ಯಕ್ಷ ಡಾ| ಕೆ. ಸಚ್ಚಿದಾನಂದ ವೈದ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಒಂದು ವರ್ಷ ಕಾಲ ಸಮಾಜ ಸೇವೆ ಮಾಡಲು ರೋಟರಿ ಸದಸ್ಯರ ಸಹಕಾರ ಯಾಚಿಸಿದರು.
ನಿಕಟ ಪೂರ್ವ ಅಧ್ಯಕ್ಷ ಎಚ್. ಕೃಷ್ಣಮೂರ್ತಿ ಬಾಯರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀವತ್ಸ ಡಿ.ರಾವ್, ರಕ್ಷಿತಾ ಕೆ.ಶೇಟ್ ಹಾಗೂ ಚೈತನ್ಯ ಕುಲಾಲ ಅವರನ್ನು ಸಮ್ಮಾನಿಸಲಾಯಿತು.ವಕೀಲ ಶ್ಯಾಮ್ ಶೆಟ್ಟಿ ಸ್ವಾಗತಿಸಿದರು. ಶಿವಪ್ರಸಾದ ಮತ್ತು ಗಾಯತ್ರಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಟಿ. ಗಂಗಾಧರ ಉಡುಪ ವಂದಿಸಿದರು.