ಕೊಚ್ಚಿ : ಬಲಪಂಥೀಯ ಹಿಂದು ಸಂಘಟನೆಗಳು ಇಂದು ಶನಿವಾರ ಕೇರಳದಲ್ಲಿ ಬೆಳಗ್ಗಿನಿಂದ ಸಂಜೆಯ ತನಕದ ಅವಧಿಯ ಮುಷ್ಕರಕ್ಕೆ ಕರೆ ನೀಡಿವೆ. ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಯಾತ್ರಾರ್ಥಿಯಾಗಿ ಹೋಗುತ್ತಿದ್ದ ಹಿರಿಯ ಸಂಘ ಪರಿವಾರ ನಾಯಕಿಯನ್ನು ಪೊಲೀಸರು ಬಂಧಿಸಿರುವುದನ್ನು ಅನುಸರಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ವಿಎಚ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಸ್ ಜೆ ಆರ್ ಕುಮಾರ್ ಅವರು “ಇಂದು ಶನಿವಾರ ನಸುಕಿನ 2.30ರ ವೇಳೆಗೆ ಶಬರಿಮಲೆ ಸಮೀಪದ ಮರಕ್ಕೂಟಂ ಎಂಬಲ್ಲಿ ಪೊಲೀಸರು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಕೆ ಪಿ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಶಶಿಕಲಾ ಅವರು ಇರುಮುಡಿಕಟ್ಟನ್ನು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಒಯ್ಯುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಅವರ ಜತೆಗೆ ಇನ್ನೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಕೇರಳ ಸರಕಾರ ಶಬರಿಮಲೆ ದೇವಸ್ಥಾನವನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂದವರು ಆರೋಪಿಸಿದರು.
ಇಂದು ಬೆಳಗ್ಗಿನಿಂದ ಸಂಜೆಯ ತನಕ ನಡೆಯುವ ಮುಷ್ಕರದಿಂದ ಆವಶ್ಯಕ ಸೇವೆಗಳ ಮತ್ತು ಅಯ್ಯಪ್ಪ ಭಕ್ತರ ವಾಹನಗಳ ಸಂಚಾರಕ್ಕೆ ಯಾವುದೇ ಬಾಧೆ ಇರುವುದಿಲ್ಲ ಎಂದು ಕುಮಾರ್ ಹೇಳಿದರು.
ಇದೇ ವೇಳೆ ಎರಡು ತಿಂಗಳ ಯಾತ್ರಾವಧಿಗಾಗಿ ತೆರೆಯಲ್ಪಟ್ಟಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕೇರಳ ಸರಕಾರ ಅಭೂತಪೂರ್ವ ಭದ್ರತೆಯನ್ನು ಆಯೋಜಿಸಿದೆ.