ರಾಯಚೂರು: ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ನಾಲ್ಕು ದಶಕದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಸಂಗೀತಗಾರರ ದೊಡ್ಡ ಬಳಗವೇ ಇದ್ದು, ಗವಾಯಿಗಳ ಆಶಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ತಿಳಿಸಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿ ಸಂಸ್ಥೆಯಿಂದ ಪಂಚಾಕ್ಷರಿ ಗವಾಯಿಗಳ ಪುಣ್ಯದಿನದ ನಿಮಿತ್ತ ಹಮ್ಮಿಕೊಂಡ 41ನೇ ಸಂಗೀತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಕ್ಷರಿ ಗವಾಯಿಗಳು ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಅದನ್ನು ಮುನ್ನಡೆಸಿಕೊಂಡು ಹೋಗುವ ಹೊಣೆ ನನ್ನ ಮೇಲಿದ್ದು, ಅವರ ಆಶೀರ್ವಾದೊಂದಿಗೆ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಮಠದಲ್ಲಿ ಬರುವ ಮಕ್ಕಳಿಗೆ ಸಂಗೀತ,ಶಿಕ್ಷಣ ಒದಗಿಸಿ ಬೆಳೆಸಲಾಗುತ್ತಿದೆ. ಧರ್ಮದ ಏಳ್ಗೆಗಾಗಿ ಗುಡಿ, ಚರ್ಚ್, ಮಸೀದಿಗಳು ಕೆಲಸ ಮಾಡುತ್ತಿದ್ದು, ಕಣ್ಣಿಲ್ಲದ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವ ಕೆಲಸ ಪಂಚಾಕ್ಷರಿ ಅವರು ಮಾಡುತ್ತಿದ್ದಾರೆ. ಕಲಾವಿದರು ಸಂಗೀತವನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಇದು ನಿರಂತರವಾಗಿ ಮುಂದುವರೆಯಲಿ ಎಂದರು. ಗದುಗಿನ ಆಶ್ರಮದಲ್ಲಿ ಈಗಾಗಲೇ 4 ಅಂತಸ್ತಿನ ಕಟ್ಟಡ ಇದ್ದು, ಬರುವ ಭಕ್ತರಿಗೆ ಉಳಿದುಕೊಳ್ಳುವ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದೆ. ಸರ್ಕಾರ ಈವರೆಗೆ ಮಠಕ್ಕೆ ಯಾವುದೇ ಅನುದಾನ ನೀಡಿಲ್ಲ.
ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಅವರಿಗೆ ಮಠಕ್ಕೆ ಅನುದಾನ ನೀಡಲು ಮನವಿ ಮಾಡಲಾಗುವುದು. ಜಿಲ್ಲೆಯಲ್ಲಿ ಗಾನಯೋಗಿ ಪಂಚಾಕ್ಷರಿ ಸಂಸ್ಥೆಗೆ ಸ್ಥಳಾಭಾವ ಕೊರತೆಯಿದ್ದು, ಅದನ್ನು ನೀಗಿಸುವ ಕೆಲಸ ಇಲ್ಲಿನ ಸಂಗೀತ ಹಾಗೂ ಪಂಚಾಕ್ಷರಿ ಗವಾಯಿಗಳ ಭಕ್ತರು ಮಾಡುತ್ತಿದ್ದಾರೆ. ಮಠದ ಭಕ್ತರೊಬ್ಬರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅದನ್ನು ಇಲ್ಲಿಯ ಸಂಗೀತ ಚಟುವಟಿಕೆ ನಡೆಸುವ ಕಟ್ಟಡಕ್ಕೆ ಬಳಕೆಯಾಗಲಿದೆ ಎಂದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪಂಚಾಕ್ಷರಿ ಗವಾಯಿಗಳ ಅವರ ಕಣ್ಣಲ್ಲಿದವರಿಗೆ ಸಂಗೀತ ಮತ್ತು ಶಿಕ್ಷಣ ನೀಡುವ ಕಾಯಕ ಮಾಡುತ್ತಿದ್ದು, ಇದು ಅತ್ಯಂತ ಮಹತ್ವದ ಕಾರ್ಯ ಎಂದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ರವಿ ಬೋಸರಾಜ, ಮಹಾಂತೇಶ ಪಾಟೀಲ್ ಅತ್ತನೂರು, ಗಿರಿಜಾ ಇದ್ದರು.