Advertisement

ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ

02:30 AM Jan 21, 2021 | Team Udayavani |

ಸಂಸ್ಕೃತಿ ಎನ್ನುವುದು ಧರ್ಮದ ವಿಸ್ತರಿತ ಹಂತ, ಮುಂದೆ ಇದು ವಾಣಿಜ್ಯ (ಕಮರ್ಷಿಯಲ್‌) ಹಂತಕ್ಕೂ ವಿಸ್ತರಣೆಯಾಗುತ್ತದೆ. ಸಂಗೀತದ ಮೂಲವೇ ಧರ್ಮ ಎಂದು ಹೆಸರಾಂತ ಹಿಂದೂಸ್ಥಾನಿ ಗಾಯಕಿ ಸಂಗೀತಾ ಕಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀಕೃಷ್ಣಮಠದ ಸಪ್ತೋತ್ಸವದ ನಿಮಿತ್ತ ಕಾರ್ಯಕ್ರಮ ನೀಡಲು ಬಂದ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಪೂರ್ಣ ಪಾಠ.

Advertisement

ನೀವು ನಾಲ್ಕನೆಯ ವಯಸ್ಸಿನಲ್ಲಿಯೇ ಹಾಡಿದ್ದೀರಂತೆ. ಇಂತಹ ಸಾಧನೆಗೆ ಮುಖ್ಯ ಕಾರಣಗಳೇನು? :

ಹೌದು. ಇದು ಧಾರವಾಡ ಆಕಾಶವಾಣಿ ಯವರು ನ. 14ರಂದು ಏರ್ಪಡಿಸಿದ ರಾಷ್ಟ್ರ ಮಟ್ಟದ ಕಾರ್ಯಕ್ರಮ. ಆಗ ಪ್ರಶ್ನೆಗಳನ್ನು ಕೇಳುತ್ತ ಕೇಳುತ್ತ ನನ್ನಿಂದ ಹಾಡಿಸಿದರು.   ಅಂದಿನಿಂದ ಇಂದಿನವರೆಗೂ ಸಾಧನೆ ನಿಂತಿಲ್ಲ. ಇದಕ್ಕೆ ಕಾರಣ ನನ್ನ ತಂದೆ ಡಾ|ಎಚ್‌.ಎ.ಕಟ್ಟಿ. ಅವರು ಮೊದಲು ಕೇಳುವ ಸಂಸ್ಕಾರವನ್ನು ಬೆಳೆಸಿದ್ದು. ಆಗ ಟೇಪ್‌ ರೆಕಾರ್ಡರ್‌ ಮೂಲಕ ಸಂಗೀತವನ್ನು ಕೇಳಿ ಸುತ್ತಿದ್ದರಲ್ಲದೆ, ಹಾಡಿಸುತ್ತಿದ್ದರು. ಸಂಗೀತಕಾ ರರಲ್ಲದಿದ್ದರೂ ನನ್ನನ್ನು ಸಂಗೀತಗಾರ್ತಿಯನ್ನಾಗಿ ಮಾಡುವ ವಿಶನ್‌ ಇತ್ತು.

ಬಾಲಿವುಡ್‌ನ‌ ಸಂಗೀತ ಸಂಯೋಜಕ ನೌಶಾದ್‌ ಅಲಿ ಗುರುಗಳಾದದ್ದು ಹೇಗೆ?

ನನ್ನ ತಂದೆ ನೌಶಾದ್‌ ಅಲಿ ಅವರ ಅಭಿಮಾನಿಯಾಗಿದ್ದರು. ನನಗೆ 4ನೇ ವರ್ಷ ಆಗಿರುವಾಗ ನೌಶಾದ್‌ ಧಾರವಾಡದ ನಮ್ಮ ಮನೆಗೆ ಬಂದಾಗ ಒಂದೆರಡು ಹಾಡುಗಳನ್ನು ಹಾಡಿದೆ. ನೌಶಾದ್‌  ತಂದೆ ಬಳಿ “ಇವಳನ್ನು ಹೀಗೆ ಯೇ ಬಿಡಬೇಡಿ. ಶಾಸ್ತ್ರೋಕ್ತವಾಗಿ ಕಲಿಸಿ. ಹವ್ಯಾಸಿ ಗಾಯಕಿಯನ್ನಾಗಿ ಮಾಡಬೇಡಿ’ ಎಂದು ಸಲಹೆ ನೀಡಿದರು. ಒಂದು ತಿಂಗಳ ಬಳಿಕ ಪತ್ರ ಬರೆದು ನೆನಪಿಸಿದರು. ಹೀಗೆ ನೌಶಾದ್‌ ದಾರಿ ತೋರಿದ ಗುರುಗಳು.

Advertisement

 ತಮ್ಮ ಸಾಧನೆಯಲ್ಲಿ ಗುರುಗಳ ಪಾತ್ರ? : 

ನೌಶಾದ್‌ ಅಲಿಯವರು ಹೇಳಿದ ತತ್‌ಕ್ಷಣವೇ ತಂದೆಯವರು ಧಾರವಾಡದಲ್ಲಿ ಈಗಲೂ ಇರುವ ಧರ್ಮಾರ್ಥ ಸಂಗೀತ ಶಾಲೆಯ ಶೇಷಗಿರಿ ದಂಡಾಪುರ, ಬಳಿಕ ಪಂ| ಚಂದ್ರಶೇಖರ ಪುರಾ ಣಿಕರಲ್ಲಿ ನನ್ನನ್ನು ಸೇರಿಸಿದರು. ಪುರಾಣಿಕರು  ಬಳಿಕ ಬಸವರಾಜ ರಾಜಗುರು ಅವರಲ್ಲಿ ಕರೆದೊಯ್ದು ಬಿಟ್ಟರು. 12 ವರ್ಷ ಅವರಲ್ಲಿ ಕಲಿತೆ. ಅವರ ನಿಧನದ ಬಳಿಕ ಕಿಶೋರಿ ಅಮೋನ್ಕರ್‌ ಅವರಲ್ಲಿ ಸಂಗೀತ ವಿದ್ಯೆಯನ್ನು ಮುಂದುವರಿಸಿದೆ. ಆರು ವರ್ಷಗಳಾಗಿದ್ದಾಗ ಕಟಗೇರಿದಾಸರು ರಾತ್ರಿ ಮಲ ಗುವಾಗ ಬರುತ್ತಿದ್ದರು. ನನಗೋ ನಿದ್ರೆಯಿಂದ ಆಕಳಿಕೆ ಬರುತ್ತಿತ್ತು. ಆರೇ ಸಾಲಿನ ಹಾಡು ಹೇಳ್ತೇನೆಂದು ದೇವರ ನಾಮಗಳನ್ನು ಹೇಳಿಕೊಡುತ್ತಿದ್ದರು. ಹೀಗೆ ಗುರುಗಳು ಒದಗಿ ಬಂದರು.

ನೀವು ಕೈಯ್ನಾಡಿಸುತ್ತಿರುವ ಶಾಸ್ತ್ರೀಯ ಸಂಗೀತ ಮತ್ತು ಸಿನೆಮಾ ಸಂಗೀತ ಇವು ವಿರುದ್ಧಧ್ರುವಗಳಂತಲ್ಲವೇ?

ನಾನು ಒಂದೇ ವರ್ಷ 25 ಚಿತ್ರಗಳಿಗೆ ಹಾಡನ್ನು ಹಾಡಿದ್ದೆ. ನಾನು ಆಗ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಸವರಾಜ ರಾಜಗುರುಗಳೂ ನಿಧನ ಹೊಂದಿದಾಗ ಒಂಥರ ಶೂನ್ಯ ಸೃಷ್ಟಿಯಾಯಿತು. ಆಗ ಸಂಗೀತದ ಮಹತ್ವ ಅರ್ಥವಾಯಿತು. ಎರಡು ವರ್ಷ ಹಾಗೇ ಇದ್ದೆ. ಬಳಿಕ ಕಿಶೋರಿ ಅಮೋನ್ಕರ್‌ ಅವರನ್ನು ಗುರುವಾಗಿ ಸ್ವೀಕರಿಸಿದೆ. ನಾನು ಅವರ ಕಾಲವಾಗುವವರೆಗೂ ಮುಂಬಯಿಗೆ ಪ್ರತೀ ತಿಂಗಳು ಹೋಗಿ ಕಲಿಯುತ್ತಿದ್ದೆ. “ಅಮೆರಿಕ ಅಮೆರಿಕ’, “ನಾಗಮಂಡಲ’ ಎರಡು ಸಿನೆಮಾಗಳಿಗೆ ಹಾಡಿದ್ದು ಅವರ ಒತ್ತಾಯಕ್ಕೆ. “ನೋಡು ನೀನು ಹಾಡಲೇ ಬೇಕು. ಸಿನೆಮಾದವರಿಗೂ ಶಾಸ್ತ್ರೀಯ ಸಂಗೀತದ ಪ್ರಭಾವ ಬೀರಬೇಕು’ ಎಂದಿದ್ದರು.

 ಮರಾಠಿ ಅಭಂಗಗಳು ಕರ್ನಾಟಕದಲ್ಲಿ ಜನಪ್ರಿಯವಾದಂತೆ ಕನ್ನಡದ ದಾಸರ, ವಚನಕಾರರ ಹಾಡುಗಳು ಬೇರೆಡೆ ಜನಪ್ರಿಯವಾಗಿವೆಯೇ? :

ಭೀಮಸೇನ ಜೋಶಿಯವರ ಸಂತವಾಣಿ ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿತ್ತು. ಮಲ್ಲಿ ಕಾರ್ಜುನ ಮನ್ಸೂರ್‌, ಬಸವರಾಜ ರಾಜಗುರು ಅವರು ವಚನಗಳನ್ನು ಜನಪ್ರಿಯಗೊಳಿಸಿದರು.

ದಾಸರು, ವಚನಕಾರರಿಗೆ ಸಂಗೀತ ಜ್ಞಾನವಿತ್ತೇ? :

ಖಂಡಿತವಾಗಿ ಇತ್ತು. ಸಂಗೀತ ಜ್ಞಾನ ಇಲ್ಲದೆ ಇರುತ್ತಿದ್ದರೆ ರಾಗಸಂಯೋಜನೆ, ತಾಳ ಸಂಯೋಜನೆ ಸುಲಭದಲ್ಲಿ ಸಾಧ್ಯವಾಗುತ್ತಿರಲಿಲ್ಲ. ವಚನ ಸಾಹಿತ್ಯಗಳು ಹಿಂದೂಸ್ಥಾನಿಯ ಚೀಸ್‌ ರೀತಿಯಲ್ಲಿ ಚಿಕ್ಕದಾಗಿದೆ. ರಾಗ, ತಾಳ, ಲಯಬದ್ಧವಾಗಿಯೇ ಹಾಡುಗಳನ್ನು ರಚಿಸಿದ್ದರು.

ಶತಮಾನಗಳ ಹಿಂದೆ ದಾಸರು, ವಚನಕಾರ ರಂತೆ ಈಗ ಹಾಡು ರಚನೆ ಆಗುತ್ತಿದೆಯೆ?

ಆ ಕಾಲವೇ ಬೇರೆ. ದಾಸರೆಂದ ಮೇಲೆ ಅಂಕಿತನಾಮ, ದೀಕ್ಷೆ ಕೊಡಬೇಕು. ಈಗಿನ ಸಾಮಾಜಿಕ ಜೀವನವೇ ಬೇರೆ. ಅಂಕಿತನಾಮದವರು ಇದ್ದಾರೆ, ಹಾಡುಗಳನ್ನೂ ರಚಿಸುತ್ತಾರೆ. ಆದರೆ ದಾಸರೆಂದು ಪರಿಗಣನೆ ಆಗುತ್ತಿಲ್ಲ. ಆಗ ತ್ಯಾಗ, ವೈರಾಗ್ಯ ಇತ್ತು. ವಚನ ಸಾಹಿತ್ಯ ರಚನೆ ಆಗುತ್ತಿಲ್ಲ ಎಂದು ಕಾಣುತ್ತದೆ.

ಭಕ್ತಿ ಸಂಗೀತವನ್ನು ಸಾಂಸ್ಕೃತಿಕ ಕಾರ್ಯಕ್ರಮವೆಂತಲೂ, ಭಜನೆಯಾಗಿ ಹಾಡಿದರೆ ಧಾರ್ಮಿಕವೆಂತಲೂ ಪರಿಗಣಿಸುತ್ತೀರಲ್ಲ? : 

ಇಂತಹ ಪ್ರಶ್ನೆಯನ್ನು ನಾನು ಇದೇ ಮೊದಲು ಎದುರಿಸಿದ್ದು. ಧರ್ಮ ಬಿಟ್ಟು ಸಂಸ್ಕೃತಿ ಇಲ್ಲ. ಭಜನೆಯನ್ನು ಸಂಪ್ರದಾಯದಂತೆ ಗುಂಪಾಗಿ ಹಾಡಿದರೆ ಧರ್ಮ ಎಂದೆನಿಸುತ್ತದೆ. ಸರಳವಾಗಿ ಹಾಡುವುದೇ ಭಜನೆ. ಈಗ “ಭಜನ್‌ ಸಾಮ್ರಾಟ್‌’ ಎಂಬ ರಿಯಾಲಿಟಿ ಶೋ ಕೂಡ ನಡೆಯುತ್ತಿದೆ. ಇದು ಸಂಸ್ಕೃತಿ ಎಂದೆನಿಸುತ್ತದೆ. ಸಂಗೀತಕಾರ ದಾಸರ ಹಾಡು ಹಾಡಿದರೆ ಸಂಸ್ಕೃತಿ ಎಂದೆನಿಸುತ್ತದೆ. ಭೀಮಸೇನ ಜೋಶಿಯವರಲ್ಲಿ “ಶ್ರೀನಿಕೇತನ’ ಹಾಡನ್ನು ಕನ್ನಡ ಬಾರದವರೂ ಹಾಡಿ ಎನ್ನುವಾಗ ಸಂಸ್ಕೃತಿ ಎನಿಸುತ್ತದೆ. ನನ್ನ ಪ್ರಕಾರ ಧರ್ಮದ ವಿಸ್ತರಿತ ಸ್ವರೂಪ ಸಂಸ್ಕೃತಿ. ಸಂಗೀತಕಾರ ಹಾಡುವಾಗ ಭಗವತ್ಸ$Ìರೂಪಿ ಪ್ರೇಕ್ಷಕ ವರ್ಗವನ್ನು ತಣಿಸಬೇಕು, ಸಂಘಟಕನಿಗೂ ಸಂತೃಪ್ತಿ ಆಗಬೇಕು. ಆಗ ಇದು ಕಮರ್ಷಿಯಲ್‌ ಆಗುತ್ತದೆ. ಆದರೂ ತನ್ನ ಧರ್ಮವನ್ನು (ಕರ್ತವ್ಯ) ಪಾಲಿಸದೆ ಬಿಡೂದಿಲ್ಲ. ರಿಲಿಜಿಯನ್‌ ಅಂದರೇನು? ಡ್ನೂಟಿ ಅಲ್ಲವೆ?

ನೌಶಾದರ ನಮಾಜೂ ಪುತ್ರಿಯ ಕಣ್ಣೀರೂ :

ನೌಶಾದರು ಚಲನಚಿತ್ರ ಹಿನ್ನೆಲೆ ಗಾಯಕ ಮಹಮ್ಮದ್‌ ರಫಿಯವರು ನಿಧನ ಹೊಂದಿದಾಗ ಬಹಳ ಖನ್ನರಾಗಿದ್ದರು. ನನ್ನ ತಂದೆ ಜತೆ ಮುಂಬಯಿಯ ಮನೆಗೆ ಹೋಗಿದ್ದೆ. ರಫಿ ನಿಧನ ಹೊಂದಿ ಮೂರು ತಿಂಗಳಾಗಿತ್ತು. ನೌಶಾದ್‌ರು ಬೇಸರದಿಂದ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ನನ್ನ ತಂದೆ ಹಾಡಲು ಹೇಳಿದರು. ಆಗ ನೌಶಾದ್‌ ಅವರು ಮನೆಯೊಳಗೆ ಹೋಗಿ ನಮಾಜು ಮಾಡಿ ಮೂರು ತಿಂಗಳುಗಳಿಂದ ಮುಟ್ಟದ ಹಾರ್ಮೋನಿಯಂನ್ನು ಹೊರಗೆ ತಂದಿಟ್ಟರು. ನಾನು ಹಾಡು ಹಾಡಿದೆ.  ಅವರು ಹಾರ್ಮೋನಿಯಂ ನುಡಿಸಿ “ಅಚ್ಚಾ ಬೇಟಾ’ ಎಂದು ಆಶೀರ್ವದಿಸಿದ್ದರು. ಅವರ ಪುತ್ರಿ ಚಹಾ ಮಾಡಿ ತರುವಾಗ ಇದನ್ನು ಕಂಡು ಕಣ್ಣೀರು ಬಂತು, ಕಾರಣ ಮೂರು ತಿಂಗಳ ಬಳಿಕ ತಂದೆ ಮತ್ತೆ ಲವಲವಿಕೆಯಿಂದಿದ್ದರು. –  ಸಂಗೀತಾ ಕಟ್ಟಿ

 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next