ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಯೋಪಿಕ್ “ಮೇಜರ್’ ಸಿನಿಮಾ ಇಂದು ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಸದ್ಯ “ಮೇಜರ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ ಬೆಂಗಳೂರಿನಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳಿಗಾಗಿ ವಿಶೇಷ ಪ್ರೀಮಿಯರ್ ಶೋವನ್ನು ಆಯೋಜಿಸಿತ್ತು.
ಈ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಸಿನಿಮಾ ತಂಡ “ಮೇಜರ್’ ಸಿನಿಮಾದ ಪ್ರಚಾರ ಕಾರ್ಯದ ಜೊತೆಗೆ ಸಿನಿಮಾದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿತು. “ಮೇಜರ್’ ಸಿನಿಮಾಕ್ಕೆ ತೆಲುಗು ನಟ ಅಡಿವಿ ಶೇಷ್ ಕಥೆ ಬರೆದು, ಸಿನಿಮಾದಲ್ಲಿ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅಡಿವಿ ಶೇಷ್, “ಮೇಜರ್ ಪಾತ್ರ ಮಾಡುವುದು ದೊಡ್ಡ ಚಾಲೆಂಜ್ ಆಗಿತ್ತು. ಸಂದೀಪ್ ಅವರ ಬಾಲ್ಯ, ಕಾಲೇಜ್ ಮತ್ತು ಸೇನೆಗೆ ಸೇರುವ ವಯಸ್ಸಿನ ಪಾತ್ರವನ್ನು ಮಾಡುವುದು ಕಷ್ಟವಾಯಿತು. ಪಾತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಂಡು ನಂತರ ಮತ್ತೆ ತೂಕ ಹೆಚ್ಚಿಸಿಕೊಳ್ಳಬೇಕಾಯ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಮುಂಬೈ ದಾಳಿಯ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಲಿದೆ. ಅನೇಕ ಜನರ ಜೀವ ಉಳಿಸಿದ ಸಂದೀಪ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ “ಮೇಜರ್’ ಟ್ರೇಲರ್ ನೋಡಿದವರು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಿನಿಮಾ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.