ಸ್ಯಾಂಡಲ್‍ವುಡ್‍ನ ಖ್ಯಾತ ಹಿರಿಯ ನಿರ್ಮಾಪಕಿ ಜಯಶ್ರೀ ದೇವಿ(60) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಯಶ್ರೀ ಅವರ ಮೃತದೇಹವನ್ನು ಬೆಂಗಳೂರಿಗೆ ತಂದು ಇಲ್ಲಿಯೇ ಅವರ ಅಂತ್ಯ ಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ಜಯಶ್ರೀ ಅವರು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಕುಮಾರ್ ಗೋವಿಂದ ಅವರು ನಟಿಸಿದ “ಕೋಣ ಈದೈತೆ’ ಚಿತ್ರವನ್ನು ನಿರ್ದೇಶನ ಹಾಗೂ ನಿರ್ಮಿಸುವುದರ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದರು.
ಇನ್ನು ಜಯಶ್ರೀ ಅವರು “ಭವಾನಿ’, “ನಮ್ಮೂರ ಮಂದಾರ ಹೂವೆ’, “ಅಮೃತವರ್ಷಿಣಿ’, “ಶ್ರೀ ಮಂಜುನಾಥ’, “ನಿಶ್ಯಬ್ಧ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಅಲ್ಲದೇ ಇತ್ತೀಚೆಗೆ ತೆರೆ ಕಂಡ ರಿಯಲ್‍ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ “ಮುಕುಂದ-ಮುರಾರಿ’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕಿಯಾಗಿದ್ದು, ಇದು ಅವರ ಕೊನೆಯ ಚಿತ್ರ.
ಜಯಶ್ರೀ ದೇವಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‍ವುಡ್ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.