ಇತ್ತೀಚೆಗೆ ಮೊಬೈಲ್ ಪೋನ್ ಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದ ಟಿಕ್‌ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಇತ್ತೀಚೆಗೆ ಯುವ ಜನತೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಟಿಕ್‌ಟಾಕ್ ಬಳಸುತ್ತಿದ್ದು, ಇದೊಂದು ವ್ಯಸನವಾಗಿ ಬದಲಾಗುತ್ತಿದೆ. ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಅನೇಕರ ಆರೋಪ.
ಈಗ ಈ ಆ್ಯಪ್ ಅನ್ನು ಬ್ಯಾನ್ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ ರೇಟಿಂಗ್‌ನಲ್ಲಿ ಇದ್ದ ಟಿಕ್‌ಟಾಕ್ ಆ್ಯಪ್ ಈಗ 1.3ಕ್ಕೆ ಇಳಿದಿದೆ. ಟಿಕ್‌ಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‌ಟಾಕ್ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಈ ಎಲ್ಲ ಕಾರಣದಿಂದ ಟಿಕ್ ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ. ಟಿಕ್‌ಟಾಕ್ ಆ್ಯಪ್‌ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‌ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜುನ್ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‌ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಇನ್ನು ಟಿಕ್‌ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್ ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಸದ್ಯ ಟ್ವಿಟ್ಟರ್ ನಲ್ಲಿ ಟಿಕ್ ಟಾಕ್ ನಿಷೇಧಿಸಿ ಅಭಿಯಾನಕ್ಕೆ ಕಲಾವಿದರು ಮತ್ತು ನಿರ್ದೇಶಕರು ಸಾಥ್ ನೀಡಿದ್ದು ಟಿಕ್ ಟಾಕ್ ಬ್ಯಾನ್ ಆಗುತ್ತ ಅನ್ನೋದು ಮುಂದೆ ಗೊತ್ತಾಗಲಿದೆ.