Advertisement

ಸ್ಟಾರ್ ಸಿನಿಮಾಗಳ ಭಯವಿಲ್ಲ…ಮೇ-ಜೂನ್‌ ನಲ್ಲಿ ಹೊಸಬರದ್ದೇ ಹವಾ

09:39 AM Apr 08, 2022 | Team Udayavani |

ಕಳೆದ ಎರಡು-ಮೂರು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸೌಂಡ್‌ ಮಾಡುತ್ತಿದ್ದ ಬಿಗ್‌ ಬಜೆಟ್‌ ಮತ್ತು ಬಿಗ್‌ ಸ್ಟಾರ್‌ ಸಿನಿಮಾಗಳು ಅಂದುಕೊಂಡಂತೆ ವರ್ಷದ ಆರಂಭದಿಂದಲೇ ಒಂದರ ಹಿಂದೊಂದು ತೆರೆ ಕಾಣುತ್ತಿದೆ. ಈಗಾಗಲೇ “ರಾಧೆಶ್ಯಾಮ್‌’, “ವಲಿಮೈ’, “ಜೇಮ್ಸ್‌’, “ಆರ್‌ಆರ್‌ಆರ್‌’ ಸೇರಿದಂತೆ ಕನ್ನಡ ಮತ್ತಿತರೆ ಭಾಷೆಗಳ ಬಹುತೇಕ ಸಿನಿಮಾಗಳು ತೆರೆಕಂಡಿದ್ದು, ಏಪ್ರಿಲ್‌ ಮೂರನೇ ವಾರದೊಳಗೆ ಸದ್ಯ ಸಾಕಷ್ಟು ಕ್ರೇಜ್‌ ಹುಟ್ಟಿಸಿರುವ ಮತ್ತೆರಡು ಬಿಗ್‌ ಬಜೆಟ್‌ ಸ್ಟಾರ್‌ ಸಿನಿಮಾಗಳಾದ “ಬೀಸ್ಟ್‌’ ಮತ್ತು “ಕೆಜಿಎಫ್-2′ ಕೂಡ ತೆರೆ ಕಾಣಲಿವೆ. ಅಲ್ಲಿಗೆ ಏಪ್ರಿಲ್‌ ಕೊನೆಯೊಳಗೆ ಈಗಾಗಲೇ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದ ಬಹುತೇಕ ಬಿಗ್‌ ಬಜೆಟ್‌ ಸ್ಟಾರ್‌ ಸಿನಿಮಾಗಳು ತೆರೆಕಂಡಂತಾಗುತ್ತದೆ.

Advertisement

ಇನ್ನು ಬಾಕಿಯಿರುವಂತೆ “ವಿಕ್ರಾಂತ್‌ ರೋಣ’, “ಬೈರಾಗಿ’, “ತೋತಾಪುರಿ’, “777 ಚಾರ್ಲಿ’, “ತ್ರಿಬಲ್‌ ರೈಡಿಂಗ್‌’, “ಗಾಳಿಪಟ-2′ ಹೀಗೆ ಒಂದಷ್ಟು ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳ ಬಿಡುಗಡೆಯ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲದಿರುವುದರಿಂದ, ಇನ್ನೂ ಎರಡು-ಮೂರು ತಿಂಗಳು ಗಾಂಧಿನಗರದಲ್ಲಿ ಯಾವುದೇ ಸ್ಟಾರ್ ಸಿನಿಮಾಗಳ ಅಬ್ಬರವಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಹೀಗಾಗಿ ಸದ್ಯದ ಮಟ್ಟಿಗೆ ಬಹುತೇಕ ಹೊಸಬರ ಮತ್ತು ಮಧ್ಯಮ ಬಜೆಟ್‌ ಸಿನಿಮಾಗಳ ಚಿತ್ತ ಮೇ ಮತ್ತು ಜೂನ್‌ ತಿಂಗಳ ಮೇಲೆ ನೆಟ್ಟಿದೆ. ಇನ್ನೂ ಕನಿಷ್ಟ ಎರಡು-ಮೂರು ತಿಂಗಳು ಸ್ಟಾರ್ ಸಿನಿಮಾಗಳ ಅಬ್ಬರವಿಲ್ಲದಿರುವುದರಿಂದ, ಏಪ್ರಿಲ್‌ ಕೊನೆಯ ವಾರದಿಂದಲೇ ಇಂಥ ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಕಳೆದ ಎರಡು – ಮೂರು ವರ್ಷಗಳಿಂದ ತೆರೆಗೆ ಬರಲು ಹವಣಿಸುತ್ತಿ ರುವ, ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳ ಬಿಡುಗಡೆ ನೋಡಿಕೊಂಡು ಥಿಯೇಟರ್‌ಗೆ ಬರುವ ಯೋಚನೆಯಲ್ಲಿದ್ದ ಬಹುತೇಕ ಹೊಸಬರ ಸಿನಿಮಾಗಳು ಮತ್ತು ಮಧ್ಯಮ ಬಜೆಟ್‌ ಸಿನಿಮಾಗಳ ಬಿಡುಗಡೆಗೆ ಮೇ ಮತ್ತು ಜೂನ್‌ ತಿಂಗಳು ಪ್ರಶಸ್ತ ಎನ್ನುವುದು ವಿತರಕರು ಮತ್ತು ಪ್ರದರ್ಶಕರ ಅಭಿಪ್ರಾಯವೂ ಆಗಿರುವುದರಿಂದ, ಇನ್ನೆರಡು ತಿಂಗಳು ಗಾಂಧಿನಗರದಲ್ಲಿ ಮತ್ತೆ ಹೊಸಬರದ್ದೇ ಹವಾ ಎನ್ನಲು ಅಡ್ಡಿಯಿಲ್ಲ!

ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ “ಅನ್‌ಟೋಲ್ಡ್‌ ಫೈಲ್ಸ್‌’ ಬಿಡುಗಡೆ

Advertisement

ಚಿತ್ರರಂಗದ ಮೂಲಗಳ ಪ್ರಕಾರ, ಏಪ್ರಿಲ್‌ ಕೊನೆಯ ವಾರದಿಂದ ಜೂನ್‌ ಕೊನೆಯವರೆಗೆ ಕನಿಷ್ಟ 50ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬರಲು ತುದಿಗಾಲಿನಲ್ಲಿವೆ. ಸದ್ಯ “ಟಕ್ಕರ್‌’, “ಮಕ್ಕಳ ತಂಟೆಗೆ ಬಂದ್ರೆ ಹುಷಾರ್‌’, “ಕ್ರಿಟಿಕಲ್‌ ಕೀರ್ತನೆಗಳು’, “ಚೇಸ್‌’, “ಅಂಬುಜಾ’, “ತೂತು ಮಡಿಕೆ’, “ಖಾಸಗಿ ಪುಟಗಳು’, “ಅಬ್ಬರ’, “ಕಸ್ತೂರಿ ಮಹಲ್‌’, “ಭರ್ಜರಿ ಗಂಡು’, “ಶೋಕಿವಾಲಾ’, “ನಟ ಭಯಂಕರ’, “ಹೊಂದಿಸಿ ಬರೆಯಿರಿ’, “ವೆಡ್ಡಿಂಗ್‌ ಗಿಫ್ಟ್’, “ಭರ್ಜರಿ ಗಂಡು’, “ಕಾಲಚಕ್ರ’, “ಸಂಭ್ರಮ’, “ಒಂದ್‌ ಊರಲ್ಲಿ ಒಂದ್‌ ಲವ್‌ ಸ್ಟೋರಿ’, “ಬಡ್ಡೀಸ್‌’, “ಪುರುಷೋತ್ತಮ’, “ಖಾಲಿ ಡಬ್ಬ’, “ಆಟೋ ಡ್ರೈವರ್‌’, “ರೆಮೋ’ ಹೀಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿ ನಿಂತಿವೆ. ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳು ಮೇ ಮತ್ತು ಜೂನ್‌ ತಿಂಗಳಿನಲ್ಲಿ ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿವೆ.

ಸ್ಟಾರ್ ಸಿನಿಮಾಗಳನ್ನು ಹೊರತು ಪಡಿಸಿದರೆ, ವರ್ಷವಿಡೀ ಥಿಯೇಟರ್‌ಗಳಿಗೆ ಜೀವ ತುಂಬುವುದು ಹೊಸಬರು ಮತ್ತು ಮಧ್ಯಮ ಬಜೆಟ್‌ ಸಿನಿಮಾಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಡೀ ಚಿತ್ರರಂಗದ ಬಹುಪಾಲು ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ವಿತರಕರು, ಪ್ರದರ್ಶಕರು, ಕಾರ್ಮಿಕರು ಹೀಗೆ ಎಲ್ಲರಿಗೂ ಚಿತ್ರೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿರುವುದೇ ಇಂಥ ಸಿನಿಮಾಗಳು. ಹಾಗಾಗಿ ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳ ಜೊತೆ ಜೊತೆಗೇ ಇಂಥ ಸಿನಿಮಾಗಳನ್ನೂ ಪ್ರೇಕ್ಷಕ ಪ್ರಭುಗಳು ಮತ್ತು ಚಿತ್ರರಂಗ ಒಟ್ಟಾಗಿ ಬೆನ್ನುತಟ್ಟಿದರೆ, ಇಂಥ ಹೊಸಬರು ಮತ್ತು ಮಧ್ಯಮ ಬಜೆಟ್‌ ಸಿನಿಮಾಗಳು ಚಿತ್ರೋದ್ಯಮದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಲು ಖಂಡಿತವಾಗಿಯೂ ಸಹಕಾರಿಯಾಗುತ್ತದೆ.

 ಜಿ.ಎಸ್‌.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next