ಕನ್ನಡದಲ್ಲಿ ಇಂದು ಮೂರು ಚಿತ್ರಗಳು ತೆರೆಗೆ ಬರುತ್ತಿದೆ. ಅವುಗಳ ವಿವರ ಇಲ್ಲಿದೆ
ಮಿಂಚುಹುಳ ನಂಬಿ ಬಂದವರು…
“ಮಿಂಚು ಹುಳ’ ಎಂಬ ಸಿನಿಮಾವೊಂದು ಇಂದು ಬಿಡುಗಡೆಯಾಗುತ್ತಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಡಾ.ರಾಜ್ ಅವರ ಸಹೋದರ ವರದಪ್ಪನವರ ಮೊಮ್ಮಗ ಪೃಥ್ವಿರಾಜ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಚಿತ್ರವನ್ನು ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಅವರು ಬಂಡವಾಳ ಹಾಕಿದ್ದು , ವಿಜಯ್ ಕುಮಾರ್ ಮತ್ತು ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ. ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ವೈರುದ್ಯ, ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.
ಗೋಪಿಲೋಲನ ಆಟ ಶುರು
“ಗೋಪಿಲೋಲ’ ಚಿತ್ರ ಇಂದು ತೆರೆಕಾಣುತ್ತಿದ್ದು, ಈ ಚಿತ್ರವನ್ನು ಆರ್.ರವೀಂದ್ರ ನಿರ್ದೇಶನ ಮಾಡಿದ್ದು, ಎಸ್.ಆರ್.ಸನತ್ ಕುಮಾರ್ ಹಾಗೂ ಮಂಜುನಾಥ್ ಅರಸ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಸನತ್ ಕುಮಾರ್ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ಇದೊಂದು ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಸಿನಿಮಾವಾಗಿದೆ. “ಗೋಪಿಲೋಲ ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ಜನರಿಗೆ ಒಂದೊಳ್ಳೆ ಸಂದೇಶ ಕೂಡ ಇದೆ’ ಎನ್ನುವುದು ನಿರ್ದೇಶಕರ ಮಾತು. ಮಂಜುನಾಥ್ ಅರಸ್ ಈ ಚಿತ್ರದ ನಿರ್ಮಾಣದಲ್ಲಿ ಸಾಥ್ ನೀಡುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿ ನಿಮಿಷ ನಟಿಸಿದ್ದಾರೆ. ಹಿರಿಯ ನಟಿ ಪದ್ಮಾ ವಾಸಂತಿ, ಎಸ್. ನಾರಾಯಣ, ನಟ ಕೆಂಪೇಗೌಡ ಮುಂತಾದವರು ಗೋಪಿಲೋಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಂದೆ–ಮಗ ಸುತ್ತ ಜನಕ
ತಂದೆ ಮಗನ ಸುತ್ತ ನಡೆಯುವ ಕಥಾಹಂದರವೊಂದಿರುವ “ಜನಕ’ ಚಿತ್ರ ಇಂದು ತೆರೆಕಾಣುತ್ತಿದೆ. ನವಪ್ರತಿಭೆ ಮನು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗಿಯೂ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ಸಂಬಂಧ ಮತ್ತು ಪ್ರೀತಿಯ ಕುರಿತು ಹೇಳಲಾಗಿದ್ದು, ಮಗ ತನ್ನ ತಂದೆಯ ಹೆಸರನ್ನು ಉಳಿಸಲು ಮತ್ತು ಅವನ ಕನಸನ್ನು ನನಸಾಗಿಸಲು ಹೋಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆಂಬುದನ್ನು ವಿವರಿಸಲಾಗಿದೆ.
ಓಂ ಶಕ್ತಿ ಕ್ರಿಯೇಶನ್ಸ್ ಎ.ಪ್ರೇಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿದ ನಾಯಕ ಕಮ್ ನಿರ್ದೇಶಕ ಮನು, ನನ್ನ ತಾಯಿಯ ಆಸೆಯಂತೆ ನಾನು ಜನಕ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಅಲ್ಲದೆ, ಚಿತ್ರದ ನಾಯಕನಾಗಿಯೂ ಸಹ ಅಭಿನಯಿಸಿದ್ದೇನೆ. ಹೀಗೆ ಮೊದಲ ಚಿತ್ರದಲ್ಲೇ ಎರಡೂ ಕೆಲಸ ನಿಭಾಯಿಸುವುದು ನನಗೆ ಸ್ವಲ್ಪ ಕಷ್ಟವಾಯಿತು ಎನ್ನುತ್ತಾರೆ. ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್ ಬಾಬು, ರಾಜಲಕ್ಷ್ಮೀ ಆನಂದ್ ನಟಿಸಿದ್ದಾರೆ.