– ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ. ಕನ್ನಡ ಚಿತ್ರರಂಗದಲ್ಲಿ ಇಂದು ಬಿಡುಗಡೆಯಾಗುತ್ತಿರುವ ಚಿತ್ರಗಳನ್ನು ಸೇರಿಸಿದರೆ ಇಲ್ಲಿವರೆಗೆ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200ರ ಗಡಿ ದಾಟಿದೆ. ಕಳೆದ ವಾರಕ್ಕೆ 195 ಪ್ಲಸ್ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಕಂಡಿದ್ದವು. ಈ ವಾರ ಬರೋಬ್ಬರಿ ಒಂಭತ್ತು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದರೊಂದಿಗೆ ಈ ವಾರ ಕನ್ನಡ ಚಿತ್ರರಂಗ ದ್ವಿಶತಕ ಬಾರಿಸುತ್ತಿದೆ. ಕಳೆದ ವರ್ಷ 180ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿ, ಅನೇಕರು ಹುಬ್ಬೆರುವಂತೆ ಮಾಡಿತ್ತು. ಆದರೆ, ಈ ವರ್ಷ ನವೆಂಬರ್ ಮೂರನೇ ವಾರಕ್ಕೆ ಕನ್ನಡ ಚಿತ್ರರಂಗ 200ರ ಗಡಿ ದಾಟಿದೆ. ನೀವು ಇದನ್ನು ಸಂಭ್ರಮವೆಂದಾದರೂ ಭಾವಿಸಬಹುದು ಅಥವಾ ಕನ್ನಡ ಚಿತ್ರರಂಗಕ್ಕೆ ಮಾರಕ ಎಂದಾದರೂ ಪರಿಗಣಿಸಬಹುದು. ಆದರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾದ ವರ್ಷವಿದು ಎನ್ನಲಡ್ಡಿಯಿಲ್ಲ. ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದೆ. “ಕೆಜಿಎಫ್’ ಚಿತ್ರಕ್ಕಾಗಿ ಹೊಸಬರ ಸಿನಿಮಾಗಳು ಹಿಂದೆ ಸರಿದರೂ ಡಿಸೆಂಬರ್‌ನಲ್ಲಿ ಏನಿಲ್ಲವೆಂದರೂ 20 ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲಿಗೆ 2018ರಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 220ರ ಗಡಿದಾಟುವ ನಿರೀಕ್ಷೆ ಇದೆ.
Advertisement
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವರ್ಷಕ್ಕೆ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿರುವ ಚಿತ್ರರಂಗಗಳ ಸಾಲಿನಲ್ಲಿ ತಮಿಳು ಬಿಟ್ಟರೆ ಕನ್ನಡ ಚಿತ್ರರಂಗ ಮುಂಚೂಣಿಯಲ್ಲಿದೆ. ತಮಿಳು ಚಿತ್ರರಂಗ ಕಳೆದ ವರ್ಷವೇ 200ರ ಗಡಿ ದಾಟಿತ್ತು. ಈ ವರ್ಷ ಕನ್ನಡ ಚಿತ್ರರಂಗ ದ್ವಿಶತಕಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗ ಶತಕ ಬಾರಿಸಿ ಐದಾರು ವರ್ಷಗಳೇ ಕಳೆದಿತ್ತು. ಅಲ್ಲಿಂದ ಇಲ್ಲಿವರೆಗೆ 120, 150, 180 … ಹೀಗೆ ದೊಡ್ಡ ಮಟ್ಟದಲ್ಲೇ ಬಿಡುಗಡೆಯನ್ನು ಕಾಣುತ್ತಾ ಬಂದಿತ್ತು. ಆದರೆ ಈ ವರ್ಷ ಕಂಡಷ್ಟು ದೊಡ್ಡ ಮಟ್ಟದ ಸಂಖ್ಯೆಯನ್ನು ಹಿಂದೆಂದೂ ಕನ್ನಡ ಚಿತ್ರರಂಗ ಕಂಡಿರಲಿಲ್ಲ. ವ್ಯಾಪಾರ ವಹಿವಾಟಿನ ದೃಷ್ಟಿಯಿಂದಲೂ ಕೋಟಿಗಟ್ಟಲೇ ಹಣ ಚಿತ್ರರಂಗದಲ್ಲಿ ಹರಿದಾಡಿದೆ. ಇಲ್ಲಿವರೆಗೆ ಬಿಡುಗಡೆಯಾದ ಹಾಗೂ ಆಗುತ್ತಿರುವ ಸಿನಿಮಾಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಅಂದಾಜು 450 ರಿಂದ 500 ಕೋಟಿಗೂ ಅಧಿಕ ಮೊತ್ತದ ಬಂಡವಾಳವನ್ನು ಈ ವರ್ಷವೂ ಕನ್ನಡ ಚಿತ್ರಗಳ ಮೇಲೆ ಹೂಡಲಾಗಿದೆ.