Advertisement

ಕೊನೆಗೂ ಈಡೇರದ ಕನಸು…ಹೀರೋಗಳು ನಿರಾಕರಿಸಿದ ಪಾತ್ರದ ಮೂಲಕ ಯಶಸ್ಸು ಗಳಿಸಿದ “ಮೂರ್ತಿ”

06:39 PM Dec 19, 2020 | Nagendra Trasi |

ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಜಡಲತಿಮ್ಮನಹಳ್ಳಿ ಕೃಷ್ಣಪ್ಪ ಶ್ರೀನಿವಾಸ ಮೂರ್ತಿ ತಮ್ಮ ಸ್ಪಷ್ಟವಾದ, ಗಂಭೀರ ನಿಲುವಿನ ನಟನೆ ಮೂಲಕ ಜನಪ್ರಿಯರಾಗಿದ್ದವರು. ಹೌದು ಇದು ಯಾವ ನಟ ಎಂದು ಹುಬ್ಬೇರಿಸಬೇಕಾಗಿಲ್ಲ. ಇವರು ಬೇರಾರು ಅಲ್ಲ ಶ್ರೀನಿವಾಸ ಮೂರ್ತಿ. ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಲು ಬಂದು ಕೊನೆಗೆ ಪೋಷಕ ನಟರ ಪಾತ್ರದಲ್ಲಿಯೇ ಪ್ರೇಕ್ಷಕರ ಮನಗೆದ್ದವರು ಮೂರ್ತಿ.

Advertisement

ಸುಮಾರು 300ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಿವಾಸಮೂರ್ತಿ ಅವರ ಬದುಕಿನ ಪಯಣದ ಹಿಂದೆ ಹಲವು ಶ್ರಮವಿದೆ. ಸಿನಿಮಾ ನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೂರ್ತಿ ಅವರು ಹಲವು ಕಷ್ಟಗಳನ್ನು ಎದುರಿಸಿದ್ದರು. ಆದರೂ ಛಲಬಿಡದೆ ಬೆಳ್ಳಿಪರದೆಗೆ ಪ್ರವೇಶ ಪಡೆದ ಹಿಂದೆ ರೋಚಕ ಕಥಾನಕವಿದೆ.

ಕೋಲಾರ ಜಿಲ್ಲೆಯ(ಈಗ ಚಿಕ್ಕಬಳ್ಳಾಪುರ) ಜಡಲತಿಮ್ಮನಹಳ್ಳಿಯಲ್ಲಿ 1949ರ ಮೇ 15ರಂದು ಜನಿಸಿದ್ದ ಶ್ರೀನಿವಾಸಮೂರ್ತಿ ಅವರು ಚಿಕ್ಕಂದಿನಲ್ಲಿಯೇ ನಾಟಕದಲ್ಲಿ ಅಭಿನಯಿಸಲು ಆರಂಭಿಸಿದ್ದರು 8ನೇ ತರಗತಿಯಲ್ಲಿದ್ದಾಗಲೇ ಚಿತ್ರನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೂರ್ತಿ ಅವರು ಮನೆ ಬಿಟ್ಟು ಮದರಾಸು ಸೇರಿಕೊಂಡುಬಿಟ್ಟಿದ್ದರಂತೆ! ಅಲ್ಲಿ ಘಟಾನುಘಟಿ ನಿರ್ದೇಶಕರ ಮನೆ ಬಾಗಿಲು ಬಡಿದಿದ್ದ ಶ್ರೀನಿವಾಸ ಮೂರ್ತಿ ಅವರಿಗೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಅಂತೂ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಶ್ರೀನಿವಾಸ ಮೂರ್ತಿ ಅವರು ಊರಿಗೆ ವಾಪಸ್ ಆಗಿದ್ದರು.

ಒಮ್ಮೆ ಚಿಕ್ಕಬಳ್ಳಾಪುರಕ್ಕೆ ಯೋಗಾನರಸಿಂಹರ ನಾಟಕ ಕಂಪನಿ ಬಿಡಾರ ಬಿಟ್ಟಿತ್ತು. ಈ ಸಂದರ್ಭದಲ್ಲಿ ಒಂದು ದಿನ ಸದಾರಮೆ ನಾಟಕದ ಸಖಾರಾಮನ ಪಾತ್ರಧಾರಿ ಕೈಕೊಟ್ಟಿದ್ದರಿಂದ ಶ್ರೀನಿವಾಸಮೂರ್ತಿ ಅವರು ಆ ಪಾತ್ರ ಮಾಡಬೇಕಾಗಿ ಬಂದಿತ್ತು. ಹೀಗೆ ಹಲವಾರು ನಾಟಕಗಳಲ್ಲಿ ನಟಿಸುತ್ತಿದ್ದ ಮೂರ್ತಿ ಅವರು ಬೆಂಗಳೂರಿಗೆ ಬಂದಿದ್ದರು. ಅಲ್ಲಿ ನವರಂಗ ಬಾರ್, ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತ ನಾಟಕದಲ್ಲಿಯೂ ಬಣ್ಣ ಹಚ್ಚುವುದನ್ನು ಮುಂದುವರಿಸಿದ್ದರು.

Advertisement

ಕೈಹಿಡಿದ ಪಾತ್ರ:

ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆದ ರಣಧೀರ ಕಂಠೀರವ ಪಾತ್ರದಲ್ಲಿ ಶ್ರೀನಿವಾಸಮೂರ್ತಿ ಅವರು ನಟಿಸಿದ್ದರು. ಮೂರ್ತಿ ಅವರ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು. ಜತೆಗೆ ಇವರ ಬದುಕಿಗೆ ಯೂಟರ್ನ್ ಕೊಟ್ಟಿತ್ತು. ಅದೇನೆಂದರೆ ಶ್ರೀನಿವಾಸ ಮೂರ್ತಿ ಅವರ ರಣಧೀರ ಕಂಠೀರವ ಪಾತ್ರ ವೀಕ್ಷಿಸಿದ್ದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರು 1977ರಲ್ಲಿ ಹೇಮಾವತಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಕಲ್ಪಿಸಿದ್ದರು. ಹೇಮಾವತಿ ಚಿತ್ರ ಅಂತರ್ಜಾತಿ ಪ್ರೇಮ ಕಥಾ ಹಂದರವನ್ನೊಳಗೊಂಡಿದ್ದು, ಮೂರ್ತಿ ಅವರ ನಟನೆಯನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕ ಬಹುವಾಗಿ ಮೆಚ್ಚಿಕೊಂಡುಬಿಟ್ಟಿದ್ದರು.

ಬಿಟ್ಟ ಪಾತ್ರಗಳ ಮೂಲಕ ಯಶಸ್ಸು ಪಡೆದಿದ್ದ ಶ್ರೀನಿವಾಸ ಮೂರ್ತಿ:

1977ರಲ್ಲಿ ನಿರ್ದೇಶಕ ಸಿದ್ದಲಿಂಗಯ್ಯನವರು “ಹೇಮಾವತಿ” ಸಿನಿಮಾ ನಿರ್ದೇಶಿಸುವ ಮೊದಲು ನಾಯಕ ನಟನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಲೋಕೇಶ್. ಆದರೆ ಅವರು ಪಾತ್ರವನ್ನು ನಿರಾಕರಿಸಿದ್ದರಿಂದ ಶ್ರೀನಿವಾಸಮೂರ್ತಿಯವರಿಗೆ ಸಿಗುವಂತಾಗಿತ್ತು.

1980ರಲ್ಲಿ ಮತ್ತೊಮ್ಮೆ ಶ್ರೀನಿವಾಸ ಮೂರ್ತಿ ಅವರಿಗೆ ಸಿದ್ದಲಿಂಗಯ್ಯನವರ ನಿರ್ದೇಶನದ ಬಿಳಿಗಿರಿಯ ಬನದಲ್ಲಿ ಚಿತ್ರದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟರು. ಅದು ಕೂಡಾ ರಾಜೇಶ್, ಶ್ರೀನಾಥ್ ಅವರು ತಿರಸ್ಕರಿಸಿದ್ದ ಪಾತ್ರವಾಗಿತ್ತು! ಬಾಳಿನ ಗುರಿ ಸಿನಿಮಾದ ಪಾತ್ರ ಬೇರೆಯವರು ನಿರಾಕರಿಸಿದ ನಂತರ ಶ್ರೀನಿವಾಸ ಮೂರ್ತಿಯವರಿಗೆ ನಟಿಸಲು ಅವಕಾಶ ಸಿಗುವಂತಾಗಿತ್ತು. ಹೀಗೆ ಹೀರೋ ಆಗಿ ಹದಿನೈದು ಚಿತ್ರಗಳಲ್ಲಿ ನಟಿಸಿದರೂ ಕೂಡಾ ಮೂರ್ತಿಯವರ ಅದೃಷ್ಟ ಕೈಹಿಡಿಯಲಿಲ್ಲ. ಕೊನೆಗೆ ಅವರ ಪೋಷಕ ಪಾತ್ರದಲ್ಲಿಯೇ ಮುಂದುವರಿಯುಂತಾಯ್ತು.

ಅಂತೂ ಡಾ.ರಾಜ್ ಕುಮಾರ್ ಜತೆಗೂಡಿ ನಟಿಸಿದ ಚಿತ್ರಗಳು ಶ್ರೀನಿವಾಸಮೂರ್ತಿಯರಿಗೆ ಹೆಚ್ಚು ಯಶಸ್ಸು ಸಿಗಲಾರಂಭಿಸಿತ್ತು. ಆದರೂ ತನ್ನ ಬದುಕಿನಲ್ಲಿ ತಾನು ಇಷ್ಟ ಪಟ್ಟ ಪಾತ್ರಗಳಿಗೆ ಪ್ರಶಸ್ತಿ ಬರಲಿಲ್ಲ ಎಂಬ ಕೊರಗಿನ ಜತೆಗೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ನನಸಾಗಲೇ ಇಲ್ಲ ಎಂಬುದು ಶ್ರೀನಿವಾಸಮೂರ್ತಿ ಅವರ ಮನದಾಳದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next