ಬೆಂಗಳೂರು: ಸ್ಯಾಂಡಲ್ ವುಡ್ ನಟ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ನೆಲಗುಳಿಯ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ರವಿವಾರ ಚಿರಂಜೀವಿ ಸರ್ಜಾ (39) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಉಸಿರಾಟದ ತೊಂದರೆಯ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳಿದಿದ್ದರು.
ರವಿವಾರ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಚಿರು ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಅವರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಫಾರ್ಮ್ಹೌಸ್ ನತ್ತ ತೆಗೆದುಕೊಂಡು ಹೋಗಲಾಯಿತು. ಸಾವಿರಾರು ಅಭಿಮಾನಿಗಳು ದಾರಿ ಮಧ್ಯೆ ನಿಂತು ಅಗಲಿದ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು.
ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಚಿರು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ತಾತ ಶಕ್ತಿಪ್ರಸಾದ್ ಅವರ ತವರೂರಾದ ಜಕ್ಕೇನಹಳ್ಳಿಯಲ್ಲಿ ಚಿರು ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನಂತರ ಕುಟುಂಬಸ್ಥರು ಸೇರಿ ನಿರ್ಧರಿಸಿದಂತೆ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ ನೆಲಗುಳಿ ಗ್ರಾಮದಲ್ಲಿರುವ ಸಹೋದರ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಕುಟುಂಬಿಕರು, ಸ್ನೇಹಿತರು, ಚಿತ್ರರರಂಗದ ಹಿರಿಯರು, ಅಪಾರ ಅಭಿಮಾನಿಗಳ ಸಮ್ಮಖದಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಡೆಯಿತು. ಪತ್ನಿ ಮೇಘನಾ, ಸಹೋದರ ಧ್ರುವ ಸರ್ಜಾ, ತಂದೆ ತಾಯಿ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಿಂದೂ ಸಂಪ್ರಾದಾಯದಂತೆ, ಪುರೋಹಿತರ ಮುಂದಾಳತ್ವದಲ್ಲಿ ಚಿರು ತಂದೆ ಅಂತಿಮ ವಿಧಿವಿಧಾನ ನೆರವೇರಿಸಿದರು.
2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಚಿರಂಜಿವಿ ಸರ್ಜಾ ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದರು. ಚಿರು, ದಂಡಂ ದಶಗುಣಂ ಮುಂತಾದ ಚಿತ್ರಗಳನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ‘ಶಿವಾರ್ಜುನ’ ಚಿತ್ರ ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಚಿರು ಸರ್ಜಾ ನಟನೆಯ ಇನ್ನೂ ಎರಡು ಮೂರು ಚಿತ್ರಗಳು ಸೆಟ್ಟೇರಿದ್ದು, ಲಾಕ್ ಡೌನ್ ಮುಗಿದ ನಂತರ ಚಿತ್ರೀಕರಣ ಮುಂದುವರಿಯುವುದರಲ್ಲಿತ್ತು. ಆದರೆ ಅದರ ನಡುವೆ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಹೊಂದಿದ್ದಾರೆ.
ಚಿತ್ರರಂಗದ ಹಿನ್ನಲೆಯುಳ್ಳ ಕುಟುಂಬದಿಂದಲೇ ಬಂದಿದ್ದ ಚಿರು, ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರ ಬಳಗವನ್ನು ಹೊಂದಿದ್ದರು. ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಲ್ಲೂ ಕಾಣಿಸಿಕೊಂಡಿದ್ದ ಚಿರು, ಸದಾ ಲವಲವಿಕೆಯಿಂದ ಇರುತ್ತಿದ್ದರು.