2021ರ ಫಸ್ಟ್ ಹಾಫ್ ಗಿಂತ ಸೆಕೆಂಡ್‌ಹಾಫ್ ಹೆಚ್ಚು ಕಲರ್‌ಫುಲ್ ಆಗಿರಲಿದೆ. ಅದಕ್ಕೆ ಕಾರಣ ಭಿನ್ನ-ವಿಭಿನ್ನ ಚಿತ್ರಗಳು. ಫಸ್ಟ್ ಹಾಫ್ನಲ್ಲಿ ಒಂದಷ್ಟು ಸ್ಟಾರ್‌ಗಳ ಸಿನಿಮಾಗಳಷ್ಟೇ ಬಿಡುಗಡೆಯಾದರೆ ಸೆಕೆಂಡ್ ಹಾಫ್ನಲ್ಲಿ ಸ್ಟಾರ್‌ಗಳ ಜೊತೆಗೆ ಹೊಸಬರ ಹಾಗೂ ಇತರ ನಟರ ಚಿತ್ರಗಳು ಕೂಡಾ ಬಿಡುಗಡೆಯಾಗುತ್ತಿವೆ…
ಚಿತ್ರಮಂದಿರಗಳಲ್ಲಿ ಶೇ 100 ಸೀಟು ಭರ್ತಿ ಸಮಸ್ಯೆ ಬಗೆಹರಿದಿದೆ. ಸಿನಿಮಾ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನಿದ್ದರೂ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾಗಳನ್ನು ನೀಡುವುದಷ್ಟೇ ಕೆಲಸ. ಆ ಕೆಲಸದಲ್ಲಿ ಈಗಾಗಲೇ ಸಿನಿಮಾ ಮಂದಿ ಬಿಝಿಯಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳು ತಮ್ಮ ಡೇಟ್ ಅನೌನ್ಸ್ ಮಾಡಿವೆ. ಈ ಮೂಲಕ ಪ್ರೇಕ್ಷಕರನ್ನು ಕೂಡಾ ಸಿನಿಮಾ ಥಿಯೇಟರ್‌ಗೆ ಅಲರ್ಟ್ ಮಾಡುತ್ತಿವೆ.
ಮೊದಲ ಹಂತವಾಗಿ ಈಗ ಜನವರಿಯಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಈಗ ಫೆಬ್ರವರಿ ಮೊದಲ ವಾರ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸದ್ಯ ಮೇವರೆಗೆ ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿವೆ. ಹಾಗಂತ ಇಷ್ಟಕ್ಕೆ ಮುಗಿದಿಲ್ಲ. ಈ ವರ್ಷಪೂರ್ತಿ ಪ್ರೇಕ್ಷಕರಿಗೆ ಹಬ್ಬದೂಟದಂತೆ ಕಲರ್‌ಫುಲ್ ಸಿನಿಮಾಗಳು ಎದುರಾಗುತ್ತಲೇ ಇರಲಿವೆ. ಹಾಗಾಗಿ, 2021ರಲ್ಲಿ ಫಸ್ಟ್‌ಹಾಫ್ ಒಂದ್ ಲೆಕ್ಕ ಆದ್ರೆ, ಸೆಕೆಂಡ್ ಹಾಫ್ ಇನ್ನೊಂದ್ ಲೆಕ್ಕ!
ಇದನ್ನೂ ಓದಿ:ಚಂದನ್ ಆಚಾರ್ ಕಣ್ಣಲ್ಲಿ ರಜಾದಿನ ಕನಸು
ನಿಮಗೆ ಗೊತ್ತಿರುವಂತೆ ಈ ವರ್ಷದ ಫಸ್ಟ್‌ಹಾಫ್ನಲ್ಲಿ “ಪೊಗರು’, “ರಾಬರ್ಟ್’, “ಯುವರತ್ನ’, “ಸಲಗ’, “ಕೋಟಿಗೊಬ್ಬ-3′, “ಭಜರಂಗಿ-2′ ಚಿತ್ರಗಳು ಬಿಡುಗಡೆಯಾಗಲಿವೆ. ಇದು ಒಂದು ಲೆಕ್ಕವಾದರೆ, ಸೆಕೆಂಡ್ ಹಾಫ್ನಲ್ಲಿ ಇನ್ನೊಂದಿಷ್ಟು ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ಲೆಕ್ಕಾ ಆರಂಭವಾಗಲಿದೆ. ಹಾಗೆ ನೋಡಿದರೆ ಫಸ್ಟ್‌ಹಾಫ್ಗಿಂತ ಸೆಕೆಂಡ್‌ಹಾಫ್ ಹೆಚ್ಚು ಕಲರ್‌ಫುಲ್ ಆಗಿರಲಿದೆ. ಅದಕ್ಕೆ ಕಾರಣ ಭಿನ್ನ-ವಿಭಿನ್ನ ಚಿತ್ರಗಳು. ಫಸ್ಟ್ ಹಾಫ್ನಲ್ಲಿ ಒಂದಷ್ಟು ಸ್ಟಾರ್‌ಗಳ ಸಿನಿಮಾಗಳಷ್ಟೇ ಬಿಡುಗಡೆಯಾದರೆ ಸೆಕೆಂಡ್ ಹಾಫ್ನಲ್ಲಿ ಸ್ಟಾರ್‌ಗಳ ಜೊತೆಗೆ ಹೊಸಬರ ಹಾಗೂ ಇತರ ನಟರ ಚಿತ್ರಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಅನೇಕ ಸಿನಿಮಾಗಳು ತಮ್ಮ ಕಂಟೆಂಟ್ ಮೂಲಕ ಈಗಾಗಲೇ ಗಮನ ಸೆಳೆದಿವೆ.
ಸೆಕೆಂಡ್‌ಹಾಫ್ ಲೆಕ್ಕ ಇದು
ಹಾಗಾದರೆ ಸೆಕೆಂಡ್ ಹಾಫ್ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು ಯಾವುವು ಎಂದು ನೋಡುವುದಾದರೆ ಮೊದಲಿಗೆ ಸಿಗೋದು “ಕೆಜಿಎಫ್-2′. ಭಾರತೀಯ ಚಿತ್ರರಂಗ ಬೆರಗುಗಣ್ಣಿನಿಂದ ನೋಡುತ್ತಿರುವ ಸಿನಿಮಾಗಳಲ್ಲಿ “ಕೆಜಿಎಫ್-2′ ಕೂಡಾ ಒಂದು. ಈಗಾಗಲೇ ಚಿತ್ರತಂಡ ಜುಲೈ 16ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದೆ. ಹಾಗೆ ನೋಡಿದರೆ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ “ಕೆಜಿಎಫ್-2’ಮೊದಲಿಗೆ ನಿಲ್ಲುತ್ತದೆ ಎಂದರೆ ತಪ್ಪಲ್ಲ. ಈ ಚಿತ್ರ ಕೂಡಾ ವರ್ಷದ ಸೆಕೆಂಡ್ ಹಾಫ್ನಲ್ಲೇ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಇಂದಿನಿಂದ ವಿಕ್ರಮನ ಸಾಹಸ ಪ್ರದರ್ಶನ: ಚಾಲೆಂಜಿಂಗ್ ಸ್ಟಾರ್ ದರ್ಶನ
ಇದಲ್ಲದೇ, ಪುನೀತ್‌ರಾಜ್‌ಕುಮಾರ್ ಅವರ “ಜೇಮ್ಸ್’, ಶಿವರಾಜ್‌ಕುಮಾರ್ ನಟನೆಯ “ಶಿವಪ್ಪ’, ಸುದೀಪ್ ಅಭಿನಯದ “ವಿಕ್ರಾಂತ್ ರೋಣ’, ಶ್ರೀಮುರಳಿ “ಮದಗಜ’, ಗಣೇಶ್ ನಟನೆಯ “ಗಾಳಿಪಟ-2′, “ತ್ರಿಬಲ್ ರೈಡಿಂಗ್’, “ಸಖತ್’, ಧ್ರುವ “ದುಬಾರಿ’, ಉಪೇಂದ್ರ ನಟನೆಯ “ಕಬj’, “ಬುದ್ಧಿವಂತ -2′, ರಮೇಶ್ ಅರವಿಂದ್ “100′, ರಕ್ಷಿತ್ ಶೆಟ್ಟಿ “777 ಚಾರ್ಲಿ’, “ಸಪ್ತಸಾಗರದಾಚೆ ಎಲ್ಲೋ’, ಪ್ರೇಮ್ ಅವರ “ಪ್ರೇಮಂ ಪೂಜ್ಯಂ’, ಜಗ್ಗೇಶ್ ನಟನೆಯ “ತೋತಾಪುರಿ-2′, ರವಿಚಂದ್ರನ್ ನಟನೆಯ “ರವಿ ಬೋಪಣ್ಣ’, ಆದಿತ್ಯ “ಮುಂದುವರೆದ ಅಧ್ಯಾಯ’, “ತ್ರಿವಿಕ್ರಮ’, “ಪ್ರಾರಂಭ’, ಆಶಿಕಾ ನಟನೆಯ “ಕಾಣೆಯಾದವರ ಬಗ್ಗೆ ಪ್ರಕಟಣೆ’, ಅಜೇಯ್ ರಾವ್ “ಶೋಕಿವಾಲಾ’, ಸೂರಿ ನಿರ್ದೇಶನದ “ಬ್ಯಾಡ್ ಮ್ಯಾನರ್’, ಶರಣ್ “ಅವತಾರ್ ಪುರುಷ-2′, ಪ್ರಜ್ವಲ್ “ಅರ್ಜುನ್ ಗೌಡ’, ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’, ಅಕ್ಷಿತ್ “ಓ ಮೈ ಲವ್’, “ಸೀತಾಯಣ’… ಹೀಗೆ ಲೆಕ್ಕ ಹಾಕುತ್ತಾ ಹೋದರೆ ಸೆಕೆಂಡ್‌ಹಾಫ್ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಎಲ್ಲಾ ಓಕೆ ಈ ವರ್ಷ ಇಷ್ಟೊಂದು ಕಲರ್‌ಫುಲ್ ಆಗಿರಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕಳೆದ ವರ್ಷ ಎಲ್ಲರನ್ನು ಕಾಡಿದ ಕೊರೊನಾ. ನಿಮಗೆ ಗೊತ್ತಿರುವಂತೆ ಕೊರೊನಾದಿಂದಾಗಿ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹಾಗಾಗಿ, ಈ ವರ್ಷ ಎಲ್ಲಾ ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಮೂಲಕ ಚಿತ್ರರಂಗ ಕೂಡಾ ಈ ಹಿಂದಿನ ವರ್ಷಕ್ಕಿಂತ ಹೆಚ್ಚು ಆ್ಯಕ್ಟೀವ್ ಆಗಿರಲಿದೆ. ವ್ಯಾಪಾರ-ವಹಿವಾಟು ಕೂಡಾ ಜೋರಾಗಿ ನಡೆಯಲಿದೆ. ಈ ವರ್ಷ ಬಹುತೇಕಟ ನಟರ ಎರಡೆರಡು ಸಿನಿಮಾಗಳು ಕೂಡಾ ತೆರೆಕಂಡು ಅಭಿಮಾನಿಗಳಿಗೆ ಖುಷಿ ನೀಡಲಿವೆ.
ರವಿಪ್ರಕಾಶ್ ರೈ