Advertisement

ಮರಳು ಅಭಾವ: ಸೊರಗಿದ ನಿರ್ಮಾಣ ವಲಯ

12:48 PM Sep 22, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮರಳಿನ ಅಭಾವ ಹೆಚ್ಚುತ್ತಿರುವುದರಿಂದ ನಿರ್ಮಾಣ ವಲಯದ ಮೇಲೆ ಹೊಡೆತ ಬೀಳುತ್ತಿದೆ. ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ತೀವ್ರ ಹಿನ್ನಡೆಯಾಗಿದೆ.

Advertisement

ಪ್ರಸ್ತುತ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧವಿದ್ದು, ಅಕ್ಟೋಬರ್‌ವರೆಗೆ ಮರಳುಗಾರಿಕೆಗೆ ಅವಕಾಶವಿಲ್ಲ. ಮುಖ್ಯವಾಗಿ ನಗರ ಭಾಗದಲ್ಲಿ ಶೇ.50ರಷ್ಟು ಕಟ್ಟಡ ನಿರ್ಮಾಣ ಕಾರ್ಯ ಮರಳಿನ ಕೊರತೆಯಿಂದ ಸ್ಥಗಿತಗೊಂಡಿದೆ. ಪರಿಸರ ಇಲಾಖೆ ಮಾರ್ಗಸೂಚಿಯಂತೆ ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ನಿಷೇಧ ಅವಧಿ ಅ.15ರವರೆಗೂ ಇರುವುದರಿಂದ ಮರಳು ಕೊರತೆ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಆಗಸ್ಟ್‌ ಮೊದಲ ವಾರದಿಂದಲೇ ಆರಂಭಿಸಬೇಕು. ಅಕ್ಟೋಬರ್‌ ಎಂದರೆ ಮತ್ತೆ ನವೆಂಬರ್‌, ಡಿಸೆಂಬರ್‌ವರೆಗೆ ಮಾತ್ರ ಮರಳು ಲಭ್ಯವಾಗಲಿದೆ. ಇದರಿಂದ ಗುಣಮಟ್ಟದ ಮರಳು ಸಿಗುವುದಿಲ್ಲ. ಮರಳು ಕೊರತೆಯಾದರೆ ನಿರ್ಮಾಣದ ಗುಣಮಟ್ಟದ ಮೇಲೂ ಹೊಡೆತ ಬೀಳುತ್ತದೆ ಎಂದು ಸಿವಿಲ್‌ ಎಂಜಿನಿಯರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 3 ಯುನಿಟ್‌ ಮರಳಿಗೆ 8,000- 8,500 ರೂ. ದರವಿದೆ. ಇದೇ ಮರಳನ್ನು ಬ್ಲ್ಯಾಕ್‌ ನಿಂದ ಖರೀದಿ ಮಾಡಿದಲ್ಲಿ ದುಪ್ಪಟ್ಟು ದರವಿದೆ. ಆದರೆ ಈ ವರ್ಷ ಬ್ಲ್ಯಾಕ್‌ನಲ್ಲಿಯೂ ಮರಳು ಸಿಗುತ್ತಿಲ್ಲ ಎಂಬ ಆರೋಪವಿದೆ.

ಗ್ರಾ.ಪಂ.: 49 ಸಾವಿರ ಮೆ. ಟನ್‌ ಮರಳು ಲಭ್ಯ

ಹೊಸ ಮರಳು ನೀತಿ 2020-21ರಂತೆ ಗ್ರಾ.ಪಂ. ವ್ಯಾಪ್ತಿಯ ಹಳ್ಳ, ಕೆರೆಗಳಲ್ಲಿ ಮರಳು ತೆಗೆಯುವ ಅವಕಾಶ ಮಾಡಿಕೊಟ್ಟಿರುವುದು ಮರಳು ಕೊರತೆ ನೀಗಿಸಬಹುದು ಎನ್ನಲಾಗುತ್ತಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ವಿಳಂಬವಾಗದ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯಬೇಕಿದೆ. ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ, ಬೈಂದೂರು ತಾ.ಪಂ. ವ್ಯಾಪ್ತಿಯ 35 ಮರಳು ನಿಕ್ಷೇಪಗಳಲ್ಲಿ ಒಟ್ಟು 49,903 ಮೆ.ಟನ್‌ ಪ್ರಮಾಣದ ಮರಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಕ್ಟೋಬರ್‌ ಅಂತ್ಯದೊಳಗೆ ಮರಳು ಲಭ್ಯ?

ನಾನ್‌ ಸಿಆರ್‌ಝಡ್‌ ವ್ಯಾಪ್ತಿ ಕುಂದಾಪುರ, ಬಳ್ಕೂರು, ಹಳ್ನಾಡಿನಲ್ಲಿ ಲೀಸ್‌ನಲ್ಲಿದೆ. ಇದರಲ್ಲಿ 75 ಸಾವಿರ ಮೆಟ್ರಿಕ್‌ ಟನ್‌ವರೆಗೂ ಲಭ್ಯವಿದ್ದು, ಒಂದು ಸರಕಾರಿ ಕಾಮಗಾರಿಗಳಿಗೆ, ಎರಡು ಸಾರ್ವಜನಿಕ ಮತ್ತು ಖಾಸಗಿ ಉದ್ದೇಶಕ್ಕೆ ನೀಡಲಾಗುತ್ತದೆ. ಚಕ್ರಾ ಮತ್ತು ಸೌಪರ್ಣಿಕಾ ನದಿಯಲ್ಲಿ 2 ಕಡೆ ಕಿಂಡಿ ಅಣೆಕಟ್ಟಿನಲ್ಲಿ ಹೂಳು ತೆಗೆಯುವ ಪ್ರಕ್ರಿಯೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಅಕ್ಟೋಬರ್‌ ಅಂತ್ಯದೊಳಗೆ ಜನರಿಗೆ ಮರಳು ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಕ್ರಾ, ಸೌಪರ್ಣಿಕಾದಲ್ಲಿ ಹೂಳೆತ್ತಲು ಅನುಮತಿ: ಮರಳುಗಾರಿಕೆಗೆ ಅ. 15ರ ವರೆಗೆ ಪರಿಸರ ಇಲಾಖೆ ಅನುಮತಿ ಇರುವುದಿಲ್ಲ, ಅ. 16ರಿಂದ ಈ ಪಕ್ರಿಯೆ ತತ್‌ಕ್ಷಣ ಆರಂಭಿಸಲಾಗುತ್ತದೆ. ನಮ್ಮಲ್ಲಿ ಮರಳಿಗೆ ಸಂಬಂಧಿಸಿ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಎರಡು ಲೀಸ್‌ ಪಾಯಿಂಟ್‌ಗಳಿವೆ. ಅದನ್ನು 2016ರಲ್ಲಿ ಟೆಂಡರ್‌ ಮಾಡಿ ಕೊಡಲಾಗಿದ್ದು, ಸದ್ಯಕ್ಕೆ 2 ಬ್ಲಾಕ್‌ ಇದೆ. ಚಕ್ರಾ ಮತ್ತು ಸೌಪರ್ಣಿಕಾದಲ್ಲಿ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಎರಡು ಕಡೆಗಳಲ್ಲಿ ಹೂಳೆತ್ತಲು ಅನುಮತಿ ನೀಡಲಾಗಿದ್ದು, ಇದು ಪರವಾನಿಗೆ ವ್ಯಾಪ್ತಿಗೆ ಬಾರದಿರುವುದರಿಂದ ಇದಕ್ಕೆ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ. ಯಾವಾಗ ಬೇಕಾದರೂ ಹೂಳೆತ್ತುವ ಪ್ರಕ್ರಿಯೆ ನಡೆಸಬಹುದು. ಇಲ್ಲಿಯೂ ಸಾಕಷ್ಟು ಮರಳು ಲಭ್ಯವಾಗುತ್ತದೆ. ಗ್ರಾ.ಪಂ. ಮಟ್ಟದಲ್ಲಿ ಮರಳು ದಿಬ್ಬಗಳನ್ನು (ಸ್ಯಾಂಡ್‌ ಬ್ಲಾಕ್‌) ಗುರುತಿಸಿ ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ದಿಬ್ಬಗಳನ್ನು ಗುರುತಿಸಲಾಗುವುದು. – ಸಂದೀಪ್‌ ಜಿ.ಯು., ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ.

ಕಟ್ಟಡ ನಿರ್ಮಾಣ ಕೆಲಸ ಬಾಕಿ: ಮರಳು ಕೊರತೆಯಿಂದಾಗಿ ಮನೆ, ಕಟ್ಟಡಗಳ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಮರಳು ಸಿಗುವವರೆಗೂ ಕೆಲಸಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಮರಳಿಗಾಗಿ ಕಾಯುತ್ತಿದ್ದಾರೆ. ಆಗಸ್ಟ್‌ ತಿಂಗಳಲ್ಲಿಯೇ ಮರಳುಗಾರಿಗೆ ಪ್ರಕ್ರಿಯೆ ಶುರುವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. – ನಾಗರಾಜ್‌ ಐತಾಳ್‌, ಎಂಜಿನಿಯರ್‌, ಉಡುಪಿ

ಕಾರ್ಮಿಕರಿಗೆ ಕೆಲಸವಿಲ್ಲ: ಮರಳಿನ ಅಭಾವದಿಂದ ಬಹುತೇಕ ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿವೆ. ಸಾವಿರಾರು ಮಂದಿ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲಿ ಕೂರುವಂತಾಗಿದೆ. ಮರಳುಗಾರಿಕೆ ಆಗಸ್ಟ್‌ನಿಂದಲೇ ಆರಂಭಿಸುವಂತೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದೇವೆ. ಮರಳಿನ ವಿಷಯದಲ್ಲಿ ನಿಯಮಗಳು ಸಡಿಲಗೊಳಿಸುವಂತೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. – ಸುಭಾಶ್ಚಂದ್ರ ನಾಯ್ಕ, ಉಪಾಧ್ಯಕ್ಷ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next