Advertisement

ಮರಳು ಅಭಾವ; ಕಾಂಗ್ರೆಸ್‌ ರಾಜಕೀಯ: ಮಠಂದೂರು

05:16 PM Oct 07, 2017 | Team Udayavani |

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2  ರ್ಷಗಳಿಂದ ಮರಳು ಅಭಾವ ತಲೆದೋರಿದ್ದು, ಇದಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಕಾರಣಕರ್ತ ರಾಗಿದ್ದು, ಕಾಂಗ್ರೆಸ್‌ ಮರಳು ಮಾಫಿಯಾ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

Advertisement

ಶುಕ್ರವಾರ ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂದಿಗೆ ಪ್ರಾಕೃತಿಕವಾಗಿ ಹೇರಳವಾಗಿ ಮರಳು ಸಿಗುವಂತೆ ಇತ್ತು, ಆದರೆ ಇಂದು ಜನಸಾಮಾನ್ಯರಿಗೆ ಮರಳು ದೊರಕದಂತಾಗಿದ್ದು, ಬಡವರು ಮನೆ ನಿರ್ಮಿಸಲು 1 ಲಾರಿ ಮರಳು ಪಡೆಯಲು 20 ಸಾವಿರ ಕೊಡುವಂತಾಗಿದೆ. ಮರಳು ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಪರವಾನಿಗೆ ನೀಡಲಾಗುವುದು ಎಂದು ಹೇಳುತ್ತಿದೆ. ಆದರೆ ಈ ವರೆಗೆ ಪ್ರಕ್ರಿಯೆ ಆರಂಭವಾಗಿಲ್ಲ. ಇಲ್ಲಿನ ಸಮಸ್ಯೆ ಜಟಿಲಗೊಳ್ಳುವುದಕ್ಕೆ ಸರಕಾರ, ಉಸ್ತುವಾರಿ ಸಚಿವರು ಮತ್ತು ಇಲ್ಲಿನ ಶಾಸಕರು ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ಉಗ್ರ ಹೋರಾಟದ ಎಚ್ಚರಿಕೆ
ಬೆಂಗಳೂರು, ಕೇರಳಕ್ಕೆ ನಿರಂತರವಾಗಿ ಸಾಗಾಟ ನಡೆಯುತ್ತಿದೆ, ಈ ಸಮಸ್ಯೆಯನ್ನು ಪ್ರತ್ಯೇಕ ಮರಳು ನೀತಿ ಮೂಲಕ ವಾರದ ಒಳಗಾಗಿ ಸರಿ ಆಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸರಳ ನೀತಿ ಜಾರಿಯಾಗಲಿ
ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೇಶವ ಗೌಡ ಮಾತನಾಡಿ, 2 ವರ್ಷಗಳ ಹಿಂದೆ ಲಾರಿ ಮರಳು ಪಡೆಯಲು 5ರಿಂದ 6 ಸಾವಿರ ರೂ. ಇದ್ದುದು, ಇದೀಗ ಅದು 20 ಸಾವಿರಕ್ಕೆ ತಲುಪಿದೆ, ಆದರೆ ಉಡುಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮರಳು ಲಭಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಈ ಸಮಸ್ಯೆಗೆ ಉಸ್ತುವಾರಿ ಸಚಿವರು ಕಾರಣರಾಗಿದ್ದಾರೆ. ಈ ಸಮಸ್ಯೆಯಿಂದಾಗಿ ಕಟ್ಟಡ ಕಾರ್ಮಿಕರೂ ಕೆಲಸ ಇಲ್ಲದೆ ಕೈಕಟ್ಟಿ ಕೂರುವಂತಾಗಿದೆ ಎಂದ ಅವರು ಮರಳು ಅಭಾವ ನಿವಾರಣೆ ಮಾಡಲು ಅತ್ಯಂತ ಸರಳ ಮರಳು ನೀತಿ ಜಾರಿಗೆ ತರಬೇಕು ಆ ಮೂಲಕ ಸರಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

Advertisement

ಪುತ್ತೂರು ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಶಾಸಕರು ಕ್ಷೇತ್ರಕ್ಕೆ ಮನೆ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ, ಆದರೆ ಅದಕ್ಕೆ ಬೇಕಾಗುವ ಮರಳು ಸಮಸ್ಯೆ ನಿವಾರಣೆ ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಪ್ರತಿಯೋರ್ವರಿಗೂ ಈ ಹಿಂದಿನಂತೆಯೇ ಮರಳು ಸಿಗುವಂತಾಗಬೇಕು, ಮರಳು ನೀತಿ ಸರಳಗೊಳಿಸಬೇಕು ಎಂದರು. ಬಡವರ್ಗದ ಜನರು ದುಪ್ಪಟ್ಟು ಹಣ ನೀಡುತ್ತೇವೆ ಎಂದು ಅಂಗಲಾಚಿದರೂ ಮರಳು ಸಿಗುತ್ತಿಲ್ಲ. ಇದರಿಂದ ಸರಕಾರಿ ಯೋಜನೆಯ ಮನೆಗಳು ಸಹ ನಿರ್ಮಾಣವಾಗದೆ ಬಾಕಿ ಉಳಿದುಕೊಂಡಿದೆ. ಹಾಗೆ ಪಂಚಾಯತ್‌ ಆಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ್‌ ಸದಸ್ಯರಾದ ಸುಜಾತಾ ಕೃಷ್ಣ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಬಿಜೆಪಿಯ ಪುರುಷೋತ್ತಮ ಮುಂಗ್ಲಿಮನೆ, ರಾಮದಾಸ ಹಾರಾಡಿ, ಉಪ್ಪಿನಂಗಡಿ ಬಿಜೆಪಿ ಮುಖಂಡ ಎನ್‌. ಉಮೇಶ್‌ ಶೆಣೈ, ಗ್ರಾಮ ಪಂಚಾಯತ್‌ ಸದಸ್ಯರಾದ ಸುನಿಲ್‌ ದಡ್ಡು, ಚಂದ್ರಶೇಖರ ಮಡಿವಾಳ, ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ಯತೀಶ್‌ ಶೆಟ್ಟಿ, ಸಿ.ಎ. ಬ್ಯಾಂಕ್‌ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಪಕ್ಷದ ಕಾರ್ಯಕರ್ತರಾದ ಸದಾನಂದ ನೆಕ್ಕಿಲಾಡಿ, ಹರೀಶ್‌ ನಟ್ಟಿಬೈಲ್‌, ಉಷಾ ಮುಳಿಯ, ಜಯಂತ ಪೊರೋಳಿ, ನಿತಿನ್‌, ಸೊಮೇಶ್‌, ಮುದ್ದ, ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಜಯಾನಂದ ಕೋಡಿಂಬಾಡಿ ಸ್ವಾಗತಿಸಿ, ಪೂವಪ್ಪ ಪಟ್ನೂರು ವಂದಿಸಿದರು. ಸುರೇಶ್‌ ಅತ್ರಮಜಲು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆ ಬಳಿಕ ಪ್ರತಿಭಟನಕಾರರು ಪೇಟೆಯಿಂದ ನಾಡ ಕಚೇರಿ ತನಕ ಮೆರವಣಿಗೆಯಲ್ಲಿ ಬಂದು ಉಪ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಗೆ ಸಿದ್ಧತೆ 
ಜಿಲ್ಲಾ ಪಂಚಾಯತ್‌ ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಪ್ರತಿಯೊಂದು ಗ್ರಾ.ಪಂ.ನಲ್ಲಿ ಬಡವರಿಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರು ಆಗಿದ್ದು, ಆದರೆ ಅದನ್ನು ನಿರ್ಮಿಸಲು ಮರಳು ಅಭಾವ ಉಂಟಾಗಿದ್ದು, ಪ್ರತಿಯೊಂದು ಪಂಚಾಯತ್‌ಗಳಲ್ಲೂ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದ್ದು, ಸರಕಾರ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದಿದ್ದಲ್ಲಿ ಜನತೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾದೀತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next