Advertisement

ಸಂಪರ್ಕ ಸೇತುವೆ ಕೆಳಗಿರುವ ಮರಳು ತೆರವಿಗೆ ಆಗ್ರಹ

11:52 AM May 12, 2022 | Team Udayavani |

ಮಲ್ಪೆ: ಕಲ್ಮಾಡಿಯಿಂದ ಕಡೆಕಾರು ಸಂಪರ್ಕವನ್ನು ನೀಡುವ ಬಂಕೇರುಕಟ್ಟ ಸೇತುವೆಯ ಕೆಳಭಾಗದಲ್ಲಿ ನೀರಿನ ರಭಸಕ್ಕೆ ಬಂದ ಮರಳು ಸೇತುವೆಯ ಅಡಿಯಲ್ಲಿ ಸೇರಿಕೊಳ್ಳುವುದರಿಂದ ನೀರು ಹರಿದು ಹೋಗದೆ ಮಳೆಗಾಲದಲ್ಲಿ ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ ತೊಡಕನ್ನುಂಟು ಮಾಡುತ್ತಿದೆ.

Advertisement

ಸೇತುವೆ ಆಡಿಯಲ್ಲಿ ನೀರು ಹರಿದು ಹೋಗಲು ಸುಮಾರು 10 ಸಿಮೆಂಟಿನ ಪೈಪ್‌ಗ್ಳನ್ನು ಆಳವಡಿಸಲಾಗಿದೆ. ಇದೀಗ ಆ ಪೈಪ್‌ನ ರಂದ್ರದೊಳಗೆ ಮರಳು ಸೇರಿ ಕೊಂಡಿದೆ ಮಾತ್ರವಲ್ಲದೆ ಕಸಕಡ್ಡಿಗಳು ತುಂಬಿ ಮುಚ್ಚಿಹೋಗಿವೆ. ಇದು ನೀರಿನ ಹರಿಯುವಿಕೆಗೆ ತಡೆಯಾಗಿ ಮಳೆಗಾಲದಲ್ಲಿ ನೀರು ಸೇತುವೆ ಮೇಲೆಯೇ ಹೋಗುತ್ತದೆ. ಸೇತುವೆಯ ಒಂದು ತುದಿ ನಗರಸಭೆಯ ಕಲ್ಮಾಡಿ ವಾರ್ಡ್‌ಗೆ ಸೇರಿದರೆ ಇನ್ನೊಂದು ತುದಿ ಅಂಬಲಪಾಡಿ ಗ್ರಾಮ ವ್ಯಾಪ್ತಿಗೆ ಸೇರಿದೆ.

ಕಿನ್ನಿಮೂಲ್ಕಿಯಿಂದ ಹರಿದು ಬಂದ ನೀರು ಕಡೆಕಾರ್‌, ಕಪ್ಪೆಟ್ಟು, ಮಜ್ಜಿಗೆಪಾದೆ, ಬಂಕೇರಕಟ್ಟ ತೋಡಿನಲ್ಲಿ ಬಂದು ಕಲ್ಮಾಡಿ ಹೊಳೆಗೆ ಹೋಗಿ ಸಮುದ್ರ ಸೇರುತ್ತದೆ. ಬಂಕೇರಕಟ್ಟ ಸೇತುವೆ ಬಳಿ ಮಣ್ಣು ಇರುವುದರಿಂದ ತಡೆಯಾಗುತ್ತಿದೆ. ಸೇತುವೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು, ಪೊದೆಗಳು ಬೆಳೆದು ಸೇತುವೆಯನ್ನು ಆವರಿಸಿಕೊಂಡಿದೆ.

ಮುಳುಗಿದ ಸೇತುವೆ

ಕಳೆದ ವರ್ಷ ಇಲ್ಲಿ ಕೃತಕ ನೆರೆ ಉಂಟಾ ಗಿದ್ದ ತೋಡಿನಲ್ಲಿ ನೀರು ರಭಸವಾಗಿ ಹರಿದು ಸೇತುವೆ ಮೇಲೆಯೇ ನೀರು ಹರಿದು ಹೋಗಿತ್ತು. ಇದರಿಂದ ಒಂದು ದಿನ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಪರದಾಡುವಂತಾಗಿತ್ತು.

Advertisement

ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹ

ಪ್ರಸ್ತುತ ಸೇತುವೆ ತಗ್ಗಾಗಿ ಇರುವುದರಿಂದ ನೀರು ಸೇತುವೆಯ ಮೇಲೆ ಹರಿಯುವುದು ಸಾಮಾನ್ಯ. ಎತ್ತರವಾಗಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next