ಉತ್ತರಪ್ರದೇಶ: ಸನಾತನ ಧರ್ಮದ ಮಹತ್ವವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಒತ್ತಿಹೇಳಿದ್ದು, ಸನಾತನ ಧರ್ಮ ಏಕೈಕ ಧರ್ಮವಾಗಿದೆ ಮತ್ತು ಉಳಿದೆಲ್ಲವೂ ಪಂಥಗಳು ಮತ್ತು ಪೂಜಾ ವಿಧಾನಗಳು ಎಂದು ಹೇಳಿದ್ದಾರೆ.
ಗೋರಖನಾಥ ದೇವಾಲಯದಲ್ಲಿ ನಡೆದ ‘ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ’ದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ ಮತ್ತು ಅದರ ಮೇಲಿನ ಯಾವುದೇ ದಾಳಿಯು ಇಡೀ ಮಾನವೀಯತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದ್ದಾರೆ.
ಶ್ರೀಮದ್ ಭಾಗವತ್ ಸಾರವನ್ನು ನಿಜವಾಗಿಯೂ ಗ್ರಹಿಸಲು ಮುಕ್ತ ಮನಸ್ಥಿತಿಯನ್ನು ಹೊಂದುವ ಮಹತ್ವವನ್ನು ಒತ್ತಿ ಹೇಳಿದರು. ಜೊತೆಗೆ ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ಬೋಧನೆಗಳ ವಿಶಾಲತೆಯನ್ನು ಒಳಗೊಳ್ಳಲು ಹೆಣಗಾಡುತ್ತವೆ ಎಂದರು.
ತಮಿಳುನಾಡು ಸಚಿವ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಇತ್ತೀಚಿಗೆ “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ” ಎಂಬ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ನಡುವೆ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ, ಉದಯನಿಧಿ ಅವರು ಸನಾತನ ಧರ್ಮದ ವಿರೋಧಿ ಹೇಳಿಕೆಗಳೊಂದಿಗೆ ಗದ್ದಲ ಎಬ್ಬಿಸಿದರು, ಇದು ದೇಶಾದ್ಯಂತ ಬಿಸಿ ಚರ್ಚೆಗೆ ಕಾರಣವಾಗಿತ್ತು.
ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ಕ್ಕೆ ಹೋಲಿಸಿ, ಅದನ್ನು ವಿರೋಧಿಸುವುದು ಮಾತ್ರವಲ್ಲ, ‘ನಿರ್ಮೂಲನೆ’ ಮಾಡಬೇಕೆಂದು ಹೇಳಿದರು. ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂಬ ಹೇಳಿಕೆಯನ್ನು ಸ್ಟಾಲಿನ್ ನೀಡಿದ್ದರು.
ಇದನ್ನೂ ಓದಿ: Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ