ದಾವಣಗೆರೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ವೇಳೆಯಲ್ಲಿ ‘ಸನಾತನ ಧರ್ಮದ ಶುದ್ಧೀಕರಣ ಆಗಬೇಕಿದೆ’ಎಂದು ಸಮಾಜ ಕಲ್ಯಾಣ ಸಚಿವ ಡಾ|ಎಚ್.ಸಿ. ಮಹ ದೇವಪ್ಪ ಪ್ರತಿಪಾದಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಶೂದ್ರರಿಗೆ ಓದುವುದನ್ನು ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ನಂತರ ಎಲ್ಲರೂ ವ್ಯಾಪಕವಾಗಿ ವಿದ್ಯೆ ಕಲಿತರು. ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದಲು ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದರು.
ಅನೇಕ ವರ್ಷಗಳ ಹಿಂದೆ ಶೂದ್ರರ ಮಕ್ಕಳನ್ನು ಓದಿಸಿದರೆ ಕಾಯಿಸಿದ ಎಣ್ಣೆಯನ್ನು ಬಿಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದರು.ಅದಕ್ಕಾಗಿಯೇ ಅಂಬೇಡ್ಕರ್ ಅವರು ಮನುವಾದವನ್ನು ಸುಟ್ಟು ಹಾಕಿದ್ದರು. ಭಾರತದ ನೆಲದಲ್ಲಿ ಯಾವುದೇ ಧರ್ಮವೂ ಮೇಲಲ್ಲ. ಎಲ್ಲ ಧರ್ಮಗಳೂ ಸಂವಿಧಾನದಡಿಯೇ ಬರುತ್ತವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶ ಪೀಠಿಕೆಯದ್ದಾಗಿದೆ ಎಂದು ತಿಳಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ… ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ. ಒಂದು ರಾಷ್ಟ್ರ ಒಂದು ಚುನಾವಣೆ ಹೇಗೆ ಸಾಧ್ಯವಾಗುತ್ತದೆ. ಕರ್ನಾಟಕದ ವಿಧಾನಸಭೆ ಚುನಾವಣೆ ಆಗಿ ಮೂರು ತಿಂಗಳಷ್ಟೇ ಕಳೆದಿದೆ. ಮತ್ತೆ ಚುನಾವಣೆ ಹೇಗೆ ಎಂದು ಪ್ರಶ್ನಿಸಿದರು.
ಉಚಿತ ಯೋಜನೆಗಳಿಂದ ದೇಶ ದಿವಾಳಿಯಾಗುತ್ತೆ ಎನ್ನುವವರು ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೇ. ಉಚಿತ ಯೋಜನೆಗಳಿಂದ ಬಡವರಿಗೆ, ಕಡು ಬಡುವರಿಗೆ, ಅಸಹಾಯಕರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಸರ್ಕಾರದ ಐದು ಗ್ಯಾರಂಟಿ ಭರವಸೆಗಳಿಂದಾಗಿ 1.32 ಕೋಟಿ ಬಡ ಜನರಿಗೆ ಯೋಜನೆ ತಲುಪುತ್ತಿವೆ. ಅದರಿಂದ ಅಂತಹ ಜನರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.ಮೋದಿ ಸೇರಿದಂತೆ ಬಿಜೆಪಿಯವರೇನು ಎಮ್ಮೆಗಳ ಮೈ ಉಜ್ಜಿದ್ದಾರಾ… ಎಂದು ಖಾರವಾಗಿ ಪ್ರಶ್ನಿಸಿದರು.