Advertisement

ಪಶ್ಚಿಮಘಟ್ಟ ಉಳಿಸಿ, ಕೆರೆ ಹೂಳೆತ್ತಿ ಸಂರಕ್ಷಿಸಿ: ಯಶ್‌

02:08 AM May 05, 2017 | Karthik A |

ಬೆಳ್ತಂಗಡಿ: ಕಳೆದ 40 ವರ್ಷಗಳಿಂದ ಪಶ್ಚಿಮಘಟ್ಟ ನಾಶವಾಗುತ್ತಿದ್ದು, ನಮ್ಮ ಅಮೂಲ್ಯ ಪರಿಸರ ಸಂಪತ್ತಿನ ರಕ್ಷಣೆಗೆ ಯುವಜನತೆ ಮುಂದಾಗಬೇಕಿದೆ. ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆಗೆ ಯುವಜನರು ಪಣತೊಡಬೇಕಿದ್ದು, ಹೂಳೆತ್ತುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿ ಪ್ರಕಟಪಡಿಸೋಣ ಎಂದು ಚಿತ್ರನಟ ಯಶ್‌ ಹೇಳಿದರು. ಅವರು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ  ಭಾಗವಹಿಸಿ ಮಾತನಾಡಿದರು.

Advertisement

ಕರೆ ನೀಡಿ
ಕೆರೆಗಳ ಸಂರಕ್ಷಣೆ ಹಾಗೂ ಪಶ್ಚಿಮಘಟ್ಟ ಉಳಿಸುವ ಕುರಿತು ಡಾ| ಹೆಗ್ಗಡೆ ಅವರು ಒಂದು ಕರೆ ನೀಡಿದರೆ ಸಾಕು. ರಾಜ್ಯದ ಜನತೆ ಸ್ಪಂದಿಸುತ್ತಾರೆ. ನನ್ನಂತಹ ಯುವಕರು ಅದನ್ನೇ ಪ್ರೇರಣೆಯಾಗಿ ಸ್ವೀಕರಿಸುತ್ತಾರೆ. ಕರ್ನಾಟಕದ ಎಲ್ಲ ಹಳ್ಳಿಗಳ ಕೆರೆಗಳ ಹೂಳೆತ್ತಿ ಜಲಸಂರಕ್ಷಣೆ ಮಾಡಬೇಕಿದೆ. ಕಳೆದ 20 ವರ್ಷಗಳಲ್ಲಿ ಪಶ್ಚಿಮಘಟ್ಟ ಶರವೇಗದಲ್ಲಿ ಬರಿದಾಗುತ್ತಿದ್ದು, ಅದರ ರಕ್ಷಣೆಯೂ ನಮ್ಮ ಹೊಣೆ. ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ಬಯಸುವುದು ತಪ್ಪು. ನಮಗೂ ಸಾಮಾಜಿಕ ಹೊಣೆಯಿದೆ. ಜವಾಬ್ದಾರಿ ಅರಿತ ನಾಗರಿಕರು ನಾವಾಗಬೇಕು ಎಂದು ಹೇಳಿದರು.


ನಾವೂ ಪ್ರತಿಜ್ಞಾಬದ್ಧರಾಗುತ್ತೇವೆ

ಮದುವೆ ವಿಜೃಂಭಣೆಗೆ ಅಲ್ಲ. ಅದು ಮಾನಸಿಕ ಬಂಧ. ಪತಿ -ಪತ್ನಿ ಜೀವನಪರ್ಯಂತ ಜತೆಯಾಗಿರುತ್ತೇವೆ ಎಂಬ ಭಾವನೆಯಿಂದ ಬದುಕುತ್ತೇವೆ. ಆ ನಂಬಿಕೆ ಹೊರಟು ಹೋದರೆ ಸಂಬಂಧ ಬರಡಾಗುತ್ತದೆ. ಇಲ್ಲಿ ಸಾಮೂಹಿಕವಾಗಿ ಎಲ್ಲರೂ ಪ್ರತಿಜ್ಞೆ ಮಾಡಿದಂತೆ ನಾನು ಹಾಗೂ ರಾಧಿಕಾ ಕೂಡ ಪ್ರೀತಿಯಿಂದ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ ಎಂದರು.

ಕ್ಷೇತ್ರದಿಂದ ಪುಣ್ಯ ಕಾರ್ಯ
ಮೊದಲಿನಿಂದಲೂ ಧರ್ಮಸ್ಥಳದ ಮೇಲೆ ವಿಶೇಷ ನಂಬಿಕೆ, ಶ್ರದ್ಧೆ ನನಗೆ. ಈವರೆಗೆ ನನ್ನನ್ನು ದೇವರು ಕೈಬಿಟ್ಟಿಲ್ಲ. ನಾವು ಇಲ್ಲಿಗೆ ಬಂದಾಗ ಒಳ್ಳೆಯದನ್ನೇ ಯೋಚಿಸಬೇಕು ಏಕೆಂದರೆ, ಕ್ಷೇತ್ರದವರು ನಾಡಿನ ಜನತೆಗೆ ಒಳಿತಾಗಬೇಕೆಂದೇ ಬಯಸುತ್ತಿರುತ್ತಾರೆ. ನಾವು ಯಶೋಮಾರ್ಗ ಮೂಲಕ ಕೆರೆಗಳ ಹೂಳೆತ್ತ ಹೊರಟಾಗ ನಮಗಿಂತ ಮೊದಲೇ ಈ ಕೆಲಸ ಮಾಡಿದ ಧರ್ಮಸ್ಥಳ ಯೋಜನೆ ನಮ್ಮ ಕಣ್ಣ ಮುಂದೆ ಬಂತು. ನಮಗೆಲ್ಲ ಮಾದರಿಯಾಗಿ ಧರ್ಮಸ್ಥಳ ಸಮಾಜ ಸೇವೆ ಮಾಡುತ್ತಿದೆ ಎಂದರು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ, ಧರ್ಮಸ್ಥಳಧಿದಲ್ಲಿ ಸಾಮೂಹಿಕ ವಿವಾಹ ಆರಂಭವಾದ ಅನಂತರ ಈಗ ಎಲ್ಲೆಡೆ ಸಾಮೂಹಿಕ ವಿವಾಹಗಳು ನಡೆಯುತ್ತಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕಾಯಾ ವಾಚಾ ಮನಸಾ ಸಂಸಾರ ಬಂಧನದಲ್ಲಿ ತೊಡಗಿಸಿಕೊಳ್ಳಬೇಕಿದೆ. ನಮಲ್ಲಿ ದಾಂಪತ್ಯ ಎಂದರೆ ಹೃದಯಬಂಧನ. ಪಾಶ್ಚಾತ್ಯರಂತಲ್ಲ. ಧಾರ್ಮಿಕ ನಂಬಿಕೆ, ಸಾಮಾಜಿಕ ಹೊಣೆಗಾರಿಕೆಯಿದೆ. ಇಲ್ಲಿ ಸಾಮೂಹಿಕ ವಿವಾಹ ಆರಂಭವಾದಾಗ ಬಡತನದ ನಿವಾರಣೆಗೆ ಆರಂಭಿಸಲಾಗಿತ್ತು. ಆದರೆ ಈಗ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ನಡೆಸಲಾಗುತ್ತಿದೆ ಎಂದರು. ಹೇಮಾವತಿ ವೀ. ಹೆಗ್ಗಡೆ, ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್‌, ಸಿಐಡಿ ಡಿಜಿಪಿ ಕಿಶೋರ್‌ಚಂದ್ರ, ರೂಪಾ ಕಿಶೋರ್‌ಚಂದ್ರ, ಕೊಲ್ಕತಾದ ಬಿರ್ಲಾ ಕಾರ್ಪೊರೇಶನ್‌ ಲಿಮಿಟೆಡ್‌ನ‌ ಕಾರ್ಯನಿರ್ವಾಹಕ ನಿರ್ದೇಧಿಶಕ ಸಂದೀಪ್‌ ರಂಜನ್‌ ಘೋಷ್‌, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇìಂದ್ರ ಕುಮಾರ್‌, ಅಮಿತ್‌ ಕುಮಾರ್‌, ಶ್ರದ್ಧಾ ಅಮಿತ್‌ ಕುಮಾರ್‌, ನಿವೃತ್ತ ಎಸ್‌ಪಿ ದಿವಾಕರ್‌ ಮೊದಲಾದವರು ಉಪಸ್ಥಿತರಿದ್ದರು. ಶ್ರೀನಿವಾಸ ರಾವ್‌ ವಂದಿಸಿದರು. ಅಜಿತ್‌ ಕುಮಾರ್‌ ಕೊಕ್ರಾಡಿ ನಿರ್ವಹಿಸಿದರು.

Advertisement


12,000ನೇ ಜೋಡಿ

ಉಡುಪಿಯ ಕಿರಣ್‌, ಕಾರ್ಕಳದ ಶ್ರೀದೇವಿ 12,000ನೇ ವಿಶೇಷ ಜೋಡಿಯಾಗಿ ಗಮನ ಸೆಳೆದರು. ಇಬ್ಬರಿಗೂ ಮಾತು ಬಾರದು. ಕಿರಣ್‌ 6ನೇ ಕಲಿತು ಕೂಲಿ ಕೆಲಸ, ಶ್ರೀದೇವಿ 7ನೇ ಕಲಿತಿದ್ದು, ಟೈಲರಿಂಗ್‌ ನಿಪುಣೆ.

12 ಜೋಡಿ ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ ಸರಕಾರದಿಂದ ಪ್ರೋತ್ಸಾಹಧನ ದೊರೆಯಲಿದೆ. 

ಯಶ್‌ ಹಾಗೂ ರಾಧಿಕಾ ಜೋಡಿ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು.

46 ವರ್ಷಗಳಲ್ಲಿ 12,029 ಜೋಡಿ ಮದುವೆಗಳಾದವು.

ಈ ವರ್ಷ 102 ಜೋಡಿಗಳು ಸತಿಪತಿಗಳಾಗಿದ್ದು, 1975ರಲ್ಲಿ ಅತೀ ಹೆಚ್ಚು 484 ಜೋಡಿಗಳು ದಂಪತಿಗಳಾಗಿದ್ದರು.

ಸಂಜೆ 6.50ರ ಗೋಧೂಳಿ ಲಗ್ನದಲ್ಲಿ ವಿವಾಹ ಸಂಪನ್ನವಾಯಿತು.

ಮದುವೆಗೆ ಮುನ್ನ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ವಧು ವರರ ಮೆರವಣಿಗೆ ನಡೆಯಿತು.

102 ಜೋಡಿ ಹಸೆಮಣೆಗೆ
ಒಟ್ಟು 102 ಜೋಡಿ ಹಸೆಮಣೆ ಏರಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 5, ಪುತ್ತೂರು 3, ಬಂಟ್ವಾಳ ತಾಲೂಕಿನ 3 ಜೋಡಿಗಳಿದ್ದವು. ಉಡುಪಿ ಜಿಲ್ಲೆಯ 27, ಚಿಕ್ಕಮಗಳೂರು 2, ಶಿವಮೊಗ್ಗ 10, ಹಾಸನ 4, ಬೆಂಗಳೂರು 9, ಮೈಸೂರು 7, ಹಾವೇರಿ 2, ಕೊಡಗು 5, ದಾವಣಗೆರೆ 3, ಧಾರವಾಡ 2, ಉತ್ತರ ಕನ್ನಡ 3, ಚಿತ್ರದುರ್ಗ 3, ಮಂಡ್ಯ 2, ರಾಮನಗರ 1, ಚಾಮರಾಜನಗರ 3, ಬಳ್ಳಾರಿ 1, ಬಾಗಲಕೋಟೆ 1, ಕೇರಳ ರಾಜ್ಯದ 6 ಜೋಡಿಯ ವಿವಾಹಗಳು ನಡೆದವು.

ವೃತ್ತಿ
ಕೂಲಿ ಕೆಲಸದ 45, ಬೇಸಾಯ ವೃತ್ತಿಯ 7, ವ್ಯಾಪಾರ ವೃತ್ತಿಯ 5, ಚಾಲಕ 8, ಖಾಸಗಿ ಉದ್ಯೋಗ 31, ಸರಕಾರಿ ಉದ್ಯೋಗ 1, ಮರದ ಕೆಲಸ 3, ಮೀನುಗಾರಿಕೆಯ 2 ಜೋಡಿಗಳು ಹೊಸಬಾಳಿಗೆ ಕಾಲಿಟ್ಟವು.

Advertisement

Udayavani is now on Telegram. Click here to join our channel and stay updated with the latest news.

Next